ಪ್ರಜಾಪ್ರಭುತ್ವ ವ್ಯವಸ್ಥೆಯು ರಾಜ ಪ್ರಭುತ್ವವಾಗುತ್ತಿರುವುದನ್ನು ವಿರೋಧಿಸಿ ಜನಜಾಗೃತಿಗಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ ; ಗಣೇಶ್ ಬೆಳ್ಳಿ

0 246

ಹೊಸನಗರ: ರಾಜ್ಯದ ಎಲ್ಲಾ ಪಕ್ಷಗಳು ಲೋಕಸಭಾ ಅಭ್ಯರ್ಥಿಗಳ ಘೋಷಣೆ ಮಾಡುತ್ತಾ ಬಂದಿರುವುದನ್ನು ನೋಡಿದರೆ ಮತ್ತೆ ರಾಜಮನೆತನಗಳ ಆಳ್ವಿಕೆಯ ಕಡೆ ಸಾಗುತ್ತಿದೆ ಅನಿಸುತ್ತದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು ತಾವು ಅಧಿಕಾರ ಅನುಭವಿಸಿದ್ದಲ್ಲದೆ ತಮ್ಮ ಮಕ್ಕಳು ತಮ್ಮ ಮೊಮ್ಮಕ್ಕಳಿಗೂ ಅಧಿಕಾರವನ್ನು ವರ್ಗಾಯಿಸುವ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು ಎಲ್ಲ ಪಕ್ಷಗಳ ಕುಟುಂಬ ರಾಜಕೀಯಕ್ಕೆ ಬೇಸತ್ತು ಈ ಬಾರಿ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸಲಿದ್ದೇವೆ ಎಂದು ಜನಜಾಗೃತಿಯ ಗಣೇಶ್ ಬೆಳ್ಳಿಯವರು ಈ ಮೂಲಕ ತಿಳಿಸಿದ್ದಾರೆ.

ರಾಜಕೀಯದಲ್ಲಿ ನೈತಿಕತೆಯನ್ನು ಸರ್ವನಾಶ ಮಾಡಿದ ರಾಜಕಾರಣಿಗಳು ಈಗ ರಾಜಕೀಯವನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡುವ ರೀತಿ ನಡೆದುಕೊಳ್ಳುತ್ತಿದ್ದಾರೆ. ದೇಶದಾದ್ಯಂತ ಲಾಲೂ, ಮುಲಾಯಂ ಹೆಸರುಗಳನ್ನು ಕೇಳಿದ ನಮಗೆ ನಮ್ಮ ರಾಜ್ಯದಲ್ಲಿಯೂ ಅದೇ ವಂಶ ಪಾರಂಪರ್ಯ ರಾಜಕಾರಣ ಪ್ರತಿ ಜಿಲ್ಲೆಯಲ್ಲಿಯೂ ಪ್ರಾರಂಭವಾಗುತ್ತಿರುವುದು ಅಪಾಯಕಾರಿ. ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿದ ಸಂದರ್ಭದಲ್ಲಿ 540 ರಾಜ ಸಂಸ್ಥಾನಗಳು ಭಾರತದಲ್ಲಿದ್ದು ಅವುಗಳನ್ನು ಸರ್ದಾರ್ ವಲ್ಲಭಾಯಿ ಪಟೇಲ್ ಕಾರ್ಯಾಧ್ಯಕ್ಷತೆಯಲ್ಲಿ ಪ್ರಜಾಪ್ರಭುತ್ವ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು. ಈಗ ಮತ್ತೆ ಅದೇ ರೀತಿ ರಾಜ ಪ್ರಭುತ್ವಗಳು ತಲೆ ಎತ್ತಲು ಪ್ರಾರಂಭವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಬುದ್ಧ ಚಿಂತನೆಗಳನ್ನು ಹೊಂದಿರಬೇಕು ಆರ್ಥಿಕ ಬಡತನದಲ್ಲಿ ಜನರನ್ನು ಇಟ್ಟು ಅವರಿಗೆ ಆಮಿಷಗಳನ್ನು ಕೊಟ್ಟು ಅಧಿಕಾರಿ ಹಿಡಿಯುವ ರಾಜಕಾರಣದ ಕುತಂತ್ರಗಾರಿಕೆಯಿಂದ ರಾಜಪ್ರಭುತ್ವದ ಕಡೆ ಪ್ರಜಾಪ್ರಭುತ್ವ ಸಾಗುತ್ತಿದೆ. ಇದನ್ನು ಪ್ರಜ್ಞಾವಂತ ಮತದಾರರು ಖಂಡಿಸಬೇಕಾಗಿದೆ.

ಕರ್ನಾಟಕದ ಲೋಕಸಭಾ ಕ್ಷೇತ್ರದ ಅನೇಕ ಕಡೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಒಗ್ಗೂಡಿಸಿ ಭಾರತೀಯ ಪ್ರಜಾಪ್ರಭುತ್ವದ ಸ್ವತಂತ್ರ ಅಭ್ಯರ್ಥಿಗಳ ಒಕ್ಕೂಟದಿಂದ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದ್ದೇವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗಣೇಶ್ ಬಿ ಬೆಳ್ಳಿ ಅವರು ಕಾರವಾರ ಕ್ಷೇತ್ರದಿಂದ ಕೃಷ್ಣ ಬಳೆಗಾರ್, ಹಾವೇರಿಯಿಂದ ಸಿದ್ದು ಪೂಜಾರ, ಹುಬ್ಬಳ್ಳಿ ಧಾರವಾಡದಿಂದ ಜಾವಿದ್ ಹೀಗೆ ಅನೇಕ ಕಡೆಗಳಲ್ಲಿ ಚುನಾವಣೆಗೆ ನಿಲ್ಲುತಿದ್ದೇವೆ. ನಮ್ಮ ಗುರಿ ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಚಾರ ಮತ್ತು ರಾಜಕೀಯ ಶುದ್ಧೀಕರಣ ಮೌಲ್ಯಯುತ ರಾಜಕಾರಣದ ಮರು ಸ್ಥಾಪನೆಯ ಉದ್ದೇಶ ಹೊಂದಿದೆ ಎಂದರು.


ಶಿವಮೊಗ್ಗ ಜಿಲ್ಲೆಯ ಎಲ್ಲಾ ಮತದಾರರು ನನ್ನನ್ನು ಗುರುತಿಸಿ ನಿಮ್ಮ ಅತ್ಯುಮೂಲ್ಯ ಮತವನ್ನು ನನಗೆ ನೀಡಿ ಈ ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಯತ್ನಿಸಿ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಿದ್ದು ಪೂಜಾರ್, ಕೃಷ್ಣ ಬಳೆಗಾರ್, ಕುಮಾರ್ ನಾಯ್ಕ್, ಜೀವನ್‌ಕುಮಾರ್, ಮಂಜುನಾಥ್, ಟಿ.ಆರ್.ಕೃಷ್ಣಪ್ಪ ಮುಂತಾದವರಿದ್ದರು.

Leave A Reply

Your email address will not be published.

error: Content is protected !!