ಮಲೆನಾಡಿನಲ್ಲಿ ಭರ್ಜರಿ ಮಳೆ, ನಿಟ್ಟುಸಿರು ಬಿಟ್ಟ ಜನ

0 1,155

ಶಿವಮೊಗ್ಗ/ಚಿಕ್ಕಮಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣದೇವ ಕೃಪೆ ತೋರಿದ್ದಾನೆ.

ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಶನಿವಾರ ಸಾಧಾರಣದಿಂದ ಜೋರು ಮಳೆಯಾಗಿದೆ.

ಹೊಸನಗರ, ಅರಸಾಳು, ಬಸವಾಪುರ, ಕೋಡೂರು, ರಿಪ್ಪನ್‌ಪೇಟೆ, ಕೆಂಚನಾಲ, ಹುಂಚ, ಗರ್ತಿಕೆರೆ, ಹೆದ್ದಾರಿಪುರ ಹಾಗೂ ಚಿಕ್ಕಜೇನಿ, ನಗರ, ನಿಟ್ಟೂರು, ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿಟ್ಟು ಬಿಡದೇ ಮಳೆ ಸುರಿಯಿತು.

ಮಳೆಯಿಲ್ಲದೆ ಬೇಸತ್ತು ಹೋಗಿದ್ದ ಪ್ರಾಣಿ ಸಂಕುಲಕ್ಕೆ. ಗಿಡಮರ ಮರಗಳಿಗೆ. ಸಸ್ಯ ಜೀವಿಗಳಿಗೆ ಹಾಗೂ ನಾಗರೀಕರಿಗೆ ಶನಿವಾರ ಸಂಜೆ ಸುರಿದ ಮಳೆಯಿಂದ ಸಂತಸದ ಜೊತೆಗೆ ರಣ ತಾಪಕ್ಕೆ ಬೇಸತ್ತು ಹೋಗಿದ್ದ ಮನಗಳಿಗೆ ಹಾಗೂ ಜೀವಸಂಕುಲಕ್ಕೆ ತಂಪೆರೆದಿದಂತಾಗಿದೆ‌.

ಕಳೆದ 7 ತಿಂಗಳಿನಿಂದ ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರಿಗೂ ಸಹ ತೊಂದರೆಯಾಗುವ ಸಂಭವವಿತ್ತು. ನಿನ್ನೆ ಸುರಿದ ಮಳೆಯಿಂದ ಅದರಲ್ಲೂ ವಿಶೇಷವಾಗಿ ಪ್ರಾಣಿ ಸಂಕುಲಕ್ಕೆ ಮತ್ತು ಸಸ್ಯ ಜೀವಿಗಳಿಗೆ  ಸ್ವಲ್ಪಮಟ್ಟಿಗಾದರೂ ನೀರಿನ ಜೊತೆಗೆ ತಂಪಿನ ವಾತಾವರಣ ದೊರೆತಂತಾಗಿದೆ.

ಏಕಾಏಕಿ ಸುರಿದ ಮಳೆಯಿಂದಾಗಿ, ಸಾರ್ವಜನಿಕರು ದಿಕ್ಕು ತೋಚದೆ ಪರದಾಡಿದರು. ಮಳೆಯಿಂದ ರಕ್ಷಿಸಿಕೊಳ್ಳಲು ಸಮೀಪದ ಅಂಗಡಿ, ಕಟ್ಟಡಗಳ ಬಳಿ ನಿಂತರು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ ದೃಶ್ಯ ಅಲ್ಲಲ್ಲಿ ಕಂಡುಬಂತು. ಗಾಳಿ ಜೊತೆಗೆ ಮಳೆ ಸುರಿದಿದ್ದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾದಿದೆ.

ಅರಸಾಳು ಗ್ರಾ.ಪಂ ವ್ಯಾಪ್ತಿಯ ಬಸವಾಪುರದಲ್ಲಿ ಸುರಿದ ಬಿರುಗಾಳಿ ಸಹಿತ ಸಿಡಿಲಬ್ಬರದ ಧಾರಾಕಾರ ಮಳೆಗೆ ಜಮೀನುಗಳು ಜಲಾವೃತಗೊಂಡಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು.

ಇನ್ನೂ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ.

ಮೂಡಿಗೆರೆ, ಕೊಪ್ಪ, ಜಯಪುರ, ತರೀಕೆರೆ, ಬಾಳೆಹೊನ್ನೂರಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಮಲ್ಲೇನಹಳ್ಳಿ, ಖಾಂಡ್ಯ, ಮುತ್ತೋಡಿ ಭಾಗದಲ್ಲಿ 3 ದಿನಗಳಿಂದ ಸಂಜೆ ವೇಳೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಬಯಲುಸೀಮೆಯ ಕಡೂರಿನಲ್ಲಿ ಸಾಧಾರಣ ಮಳೆಯಾಗಿದೆ. ಬಿಸಿಲ ಝಳಕ್ಕೆ ಕಂಗಲಾಗಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ತೋಟಕ್ಕೆ ಹೋಗಿದ್ದ ರೈತನಿಗೆ ಸಿಡಿಲು ಬಡಿದು ಮೃತಪಟ್ಟಿದ್ದು ಮೃತನನ್ನು ಎನ್.ಆರ್ ಪುರ ತಾಲ್ಲೂಕಿನ ಅರಳಿಕೊಪ್ಪದ ಶಂಕರ್ (48) ಎಂದು ಗುರುತಿಸಲಾಗಿದೆ.

Leave A Reply

Your email address will not be published.

error: Content is protected !!