ರಾಜಕೀಯ ಅನುಭವಕ್ಕೆ ಅವಕಾಶ ಮುಖ್ಯ ; ನಟ ಶಿವರಾಜ್‌ಕುಮಾರ್

0 353

ಶಿವಮೊಗ್ಗ: ಹುಟ್ಟುತ್ತಲೇ ಯಾರೂ ಕೂಡ ಅನುಭವ ಪಡೆದು ಹುಟ್ಟುವುದಿಲ್ಲ. ರಾಜಕೀಯ ಅನುಭವ ಪಡೆಯಲು ಅವಕಾಶ ನೀಡಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಸಿದ್ದೇಶ್ವರ ನಗರದ 14ನೇ ವಾರ್ಡ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಗೀತಾ ಅವರ ರಕ್ತದಲ್ಲಿಯೇ ಸಮಾಜ ಸೇವೆಯ ಗುಣ ಇದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ಸಾಮಾಜಿಕ ಮೌಲ್ಯಗಳನ್ನು ಗೀತಾಗೆ ವರವಾಗಿ ನೀಡಿ ಹೋಗಿದ್ದಾರೆ. ಇದು ರಾಜಕೀಯ ಪ್ರವೇಶಕ್ಕೆ ಪ್ರೇರಣೆ ನೀಡಿದೆ ಎಂದರು‌.

ಮಹಿಳೆಯರು ಎಲ್ಲಾ ರಂಗದಲ್ಲಿಯೂ ಮುಂದೆ ಇದ್ದಾರೆ. ಗೀತಾಗೆ ಒಂದು ಅವಕಾಶ ಕೊಡಿ ನಾನು ಅವರಿಂದ ಕೆಲಸ ಮಾಡಿಸುತ್ತೇನೆ‌ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಶಿವಮೊಗ್ಗ ಜನರ ಸೇವೆ ಮಾಡಲು ಸಿಕ್ಕ ಅವಕಾಶವಿದು. ಕೇವಲ ಚುನಾವಣೆಯಲ್ಲಿ ಮತಗಳಿಕೆಯ ರಾಜಕೀಯಕ್ಕೆ ಸ್ವಾರ್ಥದಿಂದ ಗ್ಯಾರಂಟಿ ಯೋಜನೆಗಳನ್ನು ನೀಡಿಲ್ಲ. ಇಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ದುರಾಡಳಿತದಿಂದ ಜನ ಸಾಮಾನ್ಯರನ್ನು ಮುಕ್ತಗೊಳಿಸಲು ಈ ಯೋಜನೆಗಳನ್ನು ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಜನರಿಗೆ ನೆರಳಾಗಿದ್ದರು. ಅದೇ ಹಾದಿಯಲ್ಲಿ ನಾನೂ ಕೂಡ ಸಾಗಬೇಕು ಎಂದು ಕನಸು ಕಂಡಿದ್ದೇನೆ. ಇದಕ್ಕೆ ಜನರು ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಶಿವಮೊಗ್ಗದಲ್ಲಿ ಬುಧವಾರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಉಡಿ ತುಂಬಿ ಹರಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದವರು ಕಳೆದ 15 ವರ್ಷಗಳಿಂದ ಸುಳ್ಳು ಹೇಳಿಕೊಂಡು, ಜನ ಸಾಮಾನ್ಯರಿಗೆ ಪೊಳ್ಳು ಭರವಸೆ ನೀಡುತ್ತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ, ಉತ್ತರವಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಬೆಂಬಲಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಮಾತನಾಡಿ, ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದು ಓದು ಆರಂಭಿಸಿದ ವಿದ್ಯಾರ್ಥಿಯೊರ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿ ಮಾಧ್ಯಮಗಳ ಎದುರು ‘ತಂದೆಯನ್ನು ಕಳೆದುಕೊಂಡಿರುವ ನನಗೆ ಮತ್ತು ನನ್ನ ತಾಯಿಗೆ ಗೃಹಲಕ್ಷ್ಮಿ ಯೋಜನೆ ನೆರವು ನೀಡಿದೆ ಎಂದು ತಿಳಿಸಿದ್ದಾನೆ‌. ಇದರಿಂದ, ಗ್ಯಾರಂಟಿ ಯೋಜನೆಗಳು ಬಡ ಮಕ್ಕಳ ಓದಿಗೆ ಸಹಕಾರಿ ಆಗಿದೆ ಎನ್ನುವುದನ್ನು ಜನ ಸಾಮಾನ್ಯರು ಅರ್ಥೈಸಿಕೊಳ್ಳಬೇಕು ಎಂದರು.

ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್, ಕಲೀಂ ಪಾಶ, ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ ಸೇರಿ ಕಾರ್ಯಕರ್ತರು ಇದ್ದರು.

Leave A Reply

Your email address will not be published.

error: Content is protected !!