ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ; ಸಂಸದನ ಬಂಧನಕ್ಕೆ ಆಗ್ರಹ

0 56

ಶಿವಮೊಗ್ಗ: ಅಂತರರಾಷ್ಟ್ರೀಯ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಭಾರತ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ರನ್ನು ಬಂಧಿಸಬೇಕು ಮತ್ತು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಸಂಯುಕ್ತ ಕಿಸಾನ್ ಪಂಚಾಯತ್ ಕರೆಯ ಮೇರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.


ಭಾರತ ಕುಸ್ತಿ ಫೆಡರೇಷನ್ನಿನ ಮುಖ್ಯಸ್ಥ ಹಾಗೂ ಇನ್ನಿತರ ಸಿಬ್ಬಂದಿಗಳು ಅಪ್ರಾಪ್ತ ಹೆಣ್ಣುಮಕ್ಕಳು ಸೇರಿದಂತೆ ಪ್ರಖ್ಯಾತ ಮಹಿಳಾ ಕುಸ್ತಿ ಪಟುಗಳನ್ನು ಲೈಂಗಿಕ ಕಿರುಕುಳ ಹಾಗೂ ಹಿಂಸೆಗೆ ಒಳಪಡಿಸಿರುವುದು ಅತ್ಯಂತ ಆಘಾತಕಾರಿ ಮತ್ತು ಹಿಂಸೆಗೆ ಒಳಪಡಿಸಿರುವುದು ನಾಚಿಕೆಗೇಡಿನ ಹಾಗೂ ದೇಶವೇ ತಲೆ ತಗ್ಗಿಸುವಂತಹ ಕೆಲಸವಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಭೇಟಿ ಬಚಾವೋ, ಬೇಟಿ ಪಡಾವೋ ಎಂದು ಪ್ರಚಾರ ಮಾಡುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಹೀನ ಅಪರಾಧದ ಆರೋಪಿ ಬಿಜೆಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕ್ರೀಡಾಪಟುಗಳು ನೀಡಿದ ದೂರಿನ ಮೇರೆಗೆ ರಕ್ಷಣೆ ಒದಗಿಸಬೇಕಾಗಿದ್ದ ಬಿಜೆಪಿ ಸರ್ಕಾರ ಪೊಲೀಸ್ ಪಡೆಗಳನ್ನು ಬಳಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕ್ರೀಡಾಪಟುಗಳ ಮೇಲೆ ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.


ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ನಮ್ಮ ದೇಶಕ್ಕೆ ಕೀರ್ತಿ ತಂದವರ ಮೇಲೆಯೇ ಇಷ್ಟೊಂದು ಕಿರುಕುಳ ಎಂದರೆ ದೇಶದ ಸಾಮಾನ್ಯ ಹೆಣ್ಣು ಮಕ್ಕಳ ಸುರಕ್ಷತೆ ಹೇಗೆ ಸಾಧ್ಯ, ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಹಾಗೂ ದೌರ್ಜನ್ಯದ ಕೆಲಸವಾಗಿದೆ. ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ. ಕ್ರೀಡಾಪಟುಗಳ ಆತ್ಮಸ್ಥೈರ್ಯ ಕುಂದಿಸುತ್ತದೆ. ಅಂತರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ಕೂಡ ತನಿಖೆಗೆ ನಿರ್ದೇಶನ ನೀಡಿರುವುದು ಭಾರತ ದೇಶಕ್ಕಾದ ಅವಮಾನ ಎಂದರು.


ಕೂಡಲೇ ಲೈಂಗಿಕ ಕಿರುಕುಳ ಹಾಗೂ ಹಿಂಸೆ ನೀಡಿರುವ ಬಿಜೆಪಿ ಸಂಸದನನ್ನು ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಇಲ್ಲದಿದ್ದರೆ ಜೂ.5ರಂದು ಮತ್ತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.


ಪ್ರತಿಭಟನೆಯಲ್ಲಿ ಹೆಚ್. ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಜಗದೀಶ್, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ, ಸಿ.ಚಂದ್ರಪ್ಪ, ಜಿ.ಎಂ. ಪಂಚಾಕ್ಷರಿ, ಎಂ. ಮಂಜಪ್ಪ ಇದ್ದರು.

Leave A Reply

Your email address will not be published.

error: Content is protected !!