ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ; ಆಯನೂರು ಮಂಜುನಾಥ್

0 99

ಶಿವಮೊಗ್ಗ: ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲವಿದೆ. ಸುಮಾರು 220 ವಿದಾನಸಭಾ ಕ್ಷೇತ್ರಗಳಲ್ಲಿ ಬರಗಾಲವಿದೆ ಎಂದು ಘೋಷಿಸಲಾಗಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿಂತೆ ಅಧ್ಯಯನ ನಡೆಸಿದೆ. ಪರಿಹಾರಕ್ಕಾಗಿಯೂ ಸಿದ್ಧವಾಗಿದೆ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೇವಲ ರಾಜಕಾರಣಕ್ಕಾಗಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿಲ್ಲವೆಂಬ ಸೇಡಿನ ಹಿನ್ನೆಲೆಯಲ್ಲಿ ನೆರವಿನ ಹಸ್ತ ಚಾಚಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನೆರವು ನೀಡಬೇಕಾಗಿದ್ದು ಧರ್ಮವಾಗಿದೆ. ಆದರೆ ಕೇಂದ್ರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಸುಮಾರು 33,700 ಕೋಟಿ ರೂ. ನಷ್ಟ ಉಂಟಾಗಿದೆ. ಕೇಂದ್ರದಿಂದ ಸುಮಾರು 14,500 ಕೋಟಿಯಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಕೇಂದ್ರದ ತಂಡ ರಾಜ್ಯಕ್ಕೆ ಬಂದು ಈಗಾಗಲೇ ಅಧ್ಯಯನ ಕೂಡ ಮಾಡಿದೆ. ವರದಿಯನ್ನು ಕೂಡ ತೆಗೆದುಕೊಂಡು ಹೋಗಿದೆ. ಆದರೂ ಕೂಡ ಯಾವುದೇ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದರು.

ರಾಜ್ಯದಿಂದ 25 ಬಿಜೆಪಿ ಸಂಸದರು ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ನಾಲ್ವರು ಸಚಿವರಿದ್ದರೂ ಸಹ ಕೇಂದ್ರದಿಂದ ಹಣ ತರುವಲ್ಲಿ ವಿಫಲರಾಗಿದ್ದಾರೆ. ಎಲ್ಲಾ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಬೇಕು ಎಂದರು.

ರಾಜ್ಯ ಬಿಜೆಪಿ ನಾಯಕರು ಬರ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ತಂಡ ಅಧ್ಯಯನ ಮಾಡಿದ್ದರೂ ರಾಜ್ಯ ಬಿಜೆಪಿ ನಾಯಕರ ತಂಡ ಮತ್ತೆ ಅಧ್ಯಯನ ಮಾಡಲು ಹೊರಟಿದೆ. ಈ ನಾಟಕೀಯ ಅಧ್ಯಯನವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬರ ಬಂದಿರುವುದು ಬಿಜೆಪಿಗೆ ಅವರ ಅಸ್ತಿತ್ವಕ್ಕೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಏನಾಯಿತು? ಇದೇ ಜಿಲ್ಲೆಯಲ್ಲಿ ಸಚಿವರಾಗಿದ್ದವರು ಏನು ಕೊಡುಗೆ ನೀಡಿದ್ದಾರೆ. ಈ ಯೋಜನೆಯಲ್ಲು ಕೂಡ ಸಾಕಷ್ಟು ಭ್ರಷ್ಟಾಚಾರವಾಗಿದೆ. ಕುಡಿಯುವ ನೀರಿಗೆ ತೊಂದರೆ ಆದರೆ ಅದಕ್ಕೆ ಸಂಸದರೇ ಹೊಣೆಯಾಗುತ್ತಾರೆ ಎಂದರು.

ಬಿಎಸ್‌ವೈಗೆ ವಿಶ್ರಾಂತಿ ಕೊಡಿ
ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ನೀಡಿದ ಬಿ.ಎಸ್.ಯಡಿಯೂರಪ್ಪನವರನ್ನು ಅವರ ಪಕ್ಷ ಕಡೆಗಣಿಸುತ್ತಿದೆ. ಬರ ಅಧ್ಯಯನಕ್ಕೆ ಹಿರಿಯ ಜೀವ ಎಂಬುದನ್ನು ಮರೆತು ಕಳಿಸುತ್ತಿದೆ. ಅಧಿಕಾರದಿಂದ ಇಳಿಸುವಾಗ ಇವರಿಗೆ ಯಡಿಯೂರಪ್ಪನವರ ವಯಸ್ಸು ಗೊತ್ತಿತ್ತು. ಈಗ ರಾಜ್ಯದ ತುಂಬಾ ಓಡಾಡಿಸುತ್ತಿದ್ದಾರೆ. ಈಗ ಅವರಿಗೆ ವಯಸ್ಸಾಗಿಲ್ಲವೇ. ಅವರಿಗೆ ವಿಶ್ರಾಂತಿ ಬೇಡವೇ.
– ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರ

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಏಸುದಾಸ್, ಜಿ.ಪದ್ಮನಾಭ್, ಶಿ.ಜು. ಪಾಶಾ, ಧೀರರಾಜ್ ಹೊನ್ನವಿಲೆ ಐಡಿಯಲ್ ಗೋಪಿ ಇದ್ದರು.

Leave A Reply

Your email address will not be published.

error: Content is protected !!