Shivamogga | ರಾಗಿಗುಡ್ಡ ಘಟನೆ ; ಬಿಜೆಪಿಯವರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು

0 396

ಶಿವಮೊಗ್ಗ: ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.


ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡದ ಕಹಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ಧರ್ಮಗಳನ್ನು ನೋಡದೇ ಹಲವರನ್ನು ಬಂಧಿಸಿ ಜೈಲಿಗಟ್ಟಿದೆ. ಯಾವ ಧರ್ಮದವರನ್ನು ಓಲೈಸುವ ಪ್ರಶ್ನೆಯೇ ಇಲ್ಲ. ತಪ್ಪು ತಪ್ಪೇ. ಆದರೆ, ಬಿಜೆಪಿಯ ಈಶ್ವರಪ್ಪ ಮತ್ತು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡಿ ಮತ್ತಷ್ಟು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.


ಯಾರೂ ಕುಮ್ಮಕ್ಕು ಕೊಡಬಾರದು. ಶಾಂತಿಗಾಗಿ ಪ್ರಯತ್ನಿಸಬೇಕು. ಬಿಜೆಪಿ ನಾಯಕರಿಗೂ ನಾನು ಮನವಿ ಮಾಡುತ್ತೇನೆ. ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ಶಿಕ್ಷೆ ಖಚಿತವಾಗಿರುತ್ತದೆ. ಓಲೈಕೆಯ ಪ್ರಶ್ನೆಯೇ ಇಲ್ಲ. ಈಗಾಗಲೇ ಉಸ್ತುವಾರಿ ಸಚಿವರು ಘಟನೆಗೆ ಸಂಬಂಧಿಸಿದಂತೆ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹೊರಗಡೆಯಿಂದ ಯಾರೂ ಬಂದಿರಲಿಕ್ಕೆ ಸಾಧ್ಯವಿಲ್ಲ. ಆಕಸ್ಮಾತ್ ಬಂದಿದ್ದರೆ ಪೊಲೀಸರ ಬಳಿ ಸಾಕ್ಷ್ಯಗಳಿವೆ. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದರು.


ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಇಂತಹ ಸಂದರ್ಭದಲ್ಲಿ ಸಂಯಮದಿಂದ ವರ್ತಿಸಬೇಕಾಗುತ್ತದೆ. ವೈಭವೀಕರಿಸಬೇಕಾದ ಅಗತ್ಯವಿಲ್ಲ. ಶಾಂತಿಗೆ ಭಂಗ ತರಬಾರದು. ರಾಜಕಾರಣಿಗಳು ಕೂಡ ರಾಜಕೀಯ ಲಾಭಕ್ಕಾಗಿ ಮಾತನಾಡುವುದು ಬೇಡ. ಅಲ್ಲಿನ ಜನರಿಗೆ ಭಯವನ್ನು ಉಂಟು ಮಾಡಬಾರದು. ಅಭಯವನ್ನು ನೀಡಬೇಕು. ಒಟ್ಟಾರೆ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಬೇಕು. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ, ಎಲ್ಲಾ ನಾಯಕರ ಹೊಣೆಯೂ ಕೂಡ ಇದೇ ಆಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಸಿ. ಯೋಗೀಶ್, ಅಕ್ರಂ ಪಾಶ, ಮೆಹಖ್ ಶರೀಫ್, ಯಮುನಾ ರಂಗೇಗೌಡ, ಚಂದ್ರ ಭೂಪಾಲ್ ಮೊದಲಾದವರಿದ್ದರು. 

Leave A Reply

Your email address will not be published.

error: Content is protected !!