ಸೊರಬ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 02 ರ ವರೆಗೆ ನಡೆಯಲಿರುವ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಾನೂನಾತ್ಮಕವಾಗಿ ಎಲ್ಲಾ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.
ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಶುಕ್ರವಾರದಂದು ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು
ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧಡೆ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳು ಕುಡಿಯುವ ನೀರಿನ ವ್ಯವಸ್ಥೆ, ವಾಹನ ಸಂಚಾರ ಹಾಗೂ ನಿಲುಗಡೆಗೆ ಮತ್ತು ಜಾತ್ರೆ ಮುಂಜಾಗ್ರತ ಕ್ರಮದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು,
ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಬಂದೋಬಸ್ತ್ ನಿರ್ವಹಣೆಗಾಗಿ ಅಗತ್ಯವಾಗಿರುವ ಕಡೆ ಚೆಕ್ ಪೋಸ್ಟ್ ಗಳ ಸ್ಥಾಪನೆ, ಬ್ಯಾರಿಕೇಡ್ ವ್ಯವಸ್ಥೆ, ಪೊಲೀಸ್ ಅಧಿಕಾರಿಗಳಿಗೆ ಕ್ರಮ ವಹಿಸಬೇಕು ಜಾತ್ರಾ ಸ್ಥಳದಲ್ಲಿ ಆರೋಗ್ಯ ಕೇಂದ್ರ ತೆರೆಯಬೇಕು. ಈ ಬಾರಿಯ ಶ್ರೀ ರೇಣುಕಾಂಬ ದೇವಿಯ ಜಾತ್ರೆಗೆ ಗ್ರಾಮಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಯವರು ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯ ರೇಣುಕಾ ಪ್ರಸಾದ್ ಮಾತನಾಡಿ ಜಾತ್ರಾ ಸಂದರ್ಭದಲ್ಲಿ ಶೌಚಾಲಯಗಳನ್ನು ತಾತ್ಕಾಲಿಕವಾಗಿ ಮಾಡದೆ ನಿರಂತರವಾಗಿ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಡಬೇಕು. 2018-19ನೇ ಸಾಲಿನಲ್ಲಿ ಸರ್ಕಾರವು ಕೋಟ್ಯಾಂತರ ರೂ ವೆಚ್ಚದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಯಾತ್ರೆ ನಿವಾಸ ನಿರ್ಮಿಸಿಕೊಟ್ಟಿದೆ. ಆದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ ಎಂದರು. ದೇವಸ್ಥಾನದ ಅಂಗಡಿ ಮಳಿಗೆಗಳನ್ನು ಮೊದಲು ಊರಿನ ಗ್ರಾಮಸ್ಥರಿಗೆ ಆದ್ಯತೆ ನೀಡಬೇಕು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಆಗುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಪ್ರಶ್ನಿಸಿದರು. ಅಲ್ಲದೇ ಕಾನೂನಾತ್ಮಕವಾಗಿ ದೇವಾಲಯದಲ್ಲಿ ಬರುವ ಆದಾಯದಲ್ಲಿ ಪಂಚಾಯತ್ ರಾಜ್ ಅಭಿವೃದ್ಧಿಗೆ ನೀಡಬೇಕಾದ 20 ಶೇಕಡಾ ಆದಾಯವನ್ನು ಸಹ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಾರ್ವಜನಿಕರು ಹಲವು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರು.
ಸಭೆಯಲ್ಲಿ ಗ್ರಾಂ.ಪಂ ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ದೇವಸ್ಥಾನ ಕಾರ್ಯ ನಿರ್ವಹಣಾ ಅಧಿಕಾರಿ ವಿ.ಎಲ್. ಶಿವಪ್ರಸಾದ್, ಸಿ.ಪಿ.ಐ ಭಾಗ್ಯವತಿ, ಪಿ.ಎಸ್.ಐ ನಾಗರಾಜ್, ತಾಲೂಕು ವೈದ್ಯಾಧಿಕಾರಿ ಪ್ರಭು ಸಾಹುಕಾರ್, ತಾ.ಪಂ. ಸಹಾಯಕ ನಿರ್ದೇಶಕ ಶ್ರೀರಾಮ್, ಗ್ರಾಂ.ಪಂ ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರತ್ನಾಕರ್.ಎಂ.ಪಿ ಸೇರಿದಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಗ್ರಾಂ.ಪಂ ಸದಸ್ಯರು, ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ದೇವಸ್ಥಾನದ ಸಿಬ್ಬಂಧಿಗಳು ಉಪಸ್ಥಿತರಿದ್ದರು.