ಸೊರಬ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತಿರುವ ಕ್ಷೇತ್ರದ ಶಾಸಕರು ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನವನ್ನು ಬಿಜೆಪಿ ಮುಖಂಡರ ವೈಯುಕ್ತಿಕ ಕಾಮಗಾರಿಗೆ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಆರೋಪಿಸಿದರು.
ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧವಾಗಿ ಸದಾ ಫೇಸ್‌ಬುಕ್, ವಾಟ್ಸ್‌ಪ್‌ಗಳಲ್ಲಿ ಸಕ್ರಿಯರಾಗಿರುವ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಮೀಸಲಾದ ಅನುದಾನವನ್ನು ಬಿಜೆಪಿ ಮುಖಂಡರ ವೈಯುಕ್ತಿಕ ಕಾಮಗಾರಿಗಳಿಗೆ ವಿನಿಯೋಗಿಸುತ್ತಿರುವುದು ಎಷ್ಟು ಸರಿ. ಇದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಲ್ಲವೇ ಎಂದು ಪ್ರಶ್ನಿಸಿದರು.
ನೀರಾವರಿ ನಿಗಮದ ಟಿಎಸ್‌ಪಿ ಅನುದಾನದಲ್ಲಿ ತಾಲೂಕಿನ ಕುಣೆತೆಪ್ಪ ಗ್ರಾಮದಲ್ಲಿ ಎಸ್ಟಿ ಕಾಲೋನಿಗೆ ಮೀಸಲಾದ ಅನುದಾನವನ್ನು ಹಂಚಿ ಮುಖ್ಯರಸ್ತೆಗೆ ಬಳಕೆ ಮಾಡಲಾಗಿದೆ. ಚಿಕ್ಕಚೌಟಿ ಗ್ರಾಮದಲ್ಲಿ ಎಸ್ಟಿ ಕಾಲೋನಿ ರಸ್ತೆ ನಿರ್ಮಿಸಲು ಸರ್ಕಾರ ನೀಡಿದ ಅನುದಾನವನ್ನು ಬಿಜೆಪಿ ಮುಖಂಡರೊಬ್ಬರ ತೋಟಕ್ಕೆ ರಸ್ತೆ ನಿರ್ಮಿಸಿಕೊಡಲಾಗಿದೆ. ಇನ್ನು ಯಲಿವಾಳ ಗ್ರಾಮದಲ್ಲಿ ಬಿಜೆಪಿ ಮುಖಂಡರೊಬ್ಬರ ತೋಟಕ್ಕೆ ಹೋಗುವ ರಸ್ತೆ ನಿರ್ಮಿಸಲಾಗಿದೆ. ಇವೆಲ್ಲವೂ ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನವನ್ನು ದುರ್ಭಳಕೆ ಮಾಡಲಾಗಿದ್ದು, ಇವು ಶಾಸಕರ ಗಮನಕ್ಕೆ ಬಂದಿಲ್ಲವೇ? ಶಾಸಕರಿಗೆ ಈ ಹಿಂದೆಯೂ ಎಚ್ಚರಿಕೆ ನೀಡಲಾಗಿತ್ತು. ಆದರೆ, ಪುನಾರಾವರ್ತಿತವಾಗುತ್ತಿದೆ. ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ. ಮುಂಬರುವ ಚುನಾವಣೆಯಲ್ಲಿ ದಲಿತ ಕಾಲೋನಿಗಳಿಗೆ ಶಾಸಕರು ಆಗಮಿಸದಂತೆ ಗೆರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ತಾಲೂಕು ಸಂಘಟನಾ ಸಂಚಾಲಕರಾದ ಹರೀಶ್ ಚಿಟ್ಟೂರು, ನಾಗರಾಜ ಹುರುಳಿಕೊಪ್ಪ ಉಪಸ್ಥಿತರಿದ್ದರು.