Soraba | ರೈತ ವಿರೋಧಿ ನಿಲುವು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸೆ.26 ರಂದು ಪಾದಯಾತ್ರೆ

0 141


ಸೊರಬ: ರಾಜ್ಯದಲ್ಲಿ ಬರಗಾಲದ ಸನ್ನಿವೇಷವಿರುವ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಹಾಗೂ ರೈತರ ನೆರವಿಗೆ ಬಾರದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆ.26ರಂದು ಅರಸಿಕೆರೆಯಿಂದ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥ ಗೌಡ ಹೇಳಿದರು.


ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ರೈತ ಸಂಘದಿಂದ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರೈತರಿಗೆ ಅನೇಕ ಆಶ್ವಾಸನೆಗಳನ್ನು ನೀಡಿತ್ತು. ಆದರೆ, ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ನೆರವಿಗೆ ಬರುತ್ತಿಲ್ಲ. ಬರಗಾಲ ಘೋಷಣೆಯಾಗಿದೆ ವಿನಃ, ರೈತರಿಗೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಿಲ್ಲ. ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡನೀಯವಾಗಿದೆ ಎಂದರು.


ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಎನ್. ಪಾಟೀಲ್ ಮಾತನಾಡಿ, ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾವೇರಿ ನೀರಿನ ವಿಷಯದಲ್ಲಿ ದಿಟ್ಟ ನಿಲುವು ತಾಳಿದ್ದರು. ಆದರೆ, ಪ್ರಸ್ತುತ ಆಡಳಿತದಲ್ಲಿರುವವರು ರೈತರ ಬಗ್ಗೆ ಕಿಂಚಿತ್ತು ಗಮನ ನೀಡುತ್ತಿಲ್ಲ. ಕಬ್ಬು ಬೆಳೆಗಾರರು ನಷ್ಟದಲ್ಲಿದ್ದಾರೆ. ತೆಂಗು ಬೆಳೆಗೆ ಬೆಲೆ ಇಲ್ಲದಂತಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಅಳಿದುಳಿದ ಬೆಳೆಗಳು ಒಣಗಿ ಹಾಳಾಗುತ್ತಿವೆ. ಬಗರ್‍ಹುಕುಂ ರೈತರಿಗೆ ಭೂ ಮಂಜೂರಾತಿ ಕೈಗೊಳ್ಳವಲ್ಲಿ ನಿರ್ಲಕ್ಷ್ಯ ಸೇರಿದಂತೆ ಆಡಳಿತ ರೂಢ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವುಗಳನ್ನು ವಿರೋಧಿಸಿ ಅರಸಿಕೆರೆಯಿಂದ ಸಂಘಟಟನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿ ಅ.4ರಂದು ಸಾವಿರಾರು ರೈತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದರು.


ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಶಫಿವುಲ್ಲಾ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಶಿಕಾರಿಪುರ ತಾಲೂಕು ಅಧ್ಯಕ್ಷ ಸಿ.ವೈ. ರವಿ, ರೈತ ಮುಖಂಡರಾದ ಧನಂಜಯ ಬನ್ನೂರು, ಶಿವಪ್ಪ ಹುಣಸವಳ್ಳಿ, ಕೃಷ್ಣಪ್ಪ ಶಿಕಾರಿಪುರ, ಈರಮ್ಮ, ಶಿವಕುಮಾರ್, ಲೋಕಪ್ಪ, ಫಕೀರಸ್ವಾಮಿ, ಎಸ್. ವೀರನಗೌಡ ಗಿಣಿವಾಲ, ಜಿ.ಎಸ್. ಚಿತ್ರಶೇಖರಗೌಡ ಸೇರಿದಂತೆ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!