ಪ್ರತಿಭಾನ್ವಿತ ಕಲಾವಿದೆ ವಿದುಷಿ ಕು|| ಅನಘ ಆಚಾರ್ಯ ನಾಳೆ ರಂಗ ಪ್ರವೇಶ

0 35


ತೀರ್ಥಹಳ್ಳಿ : ಇಲ್ಲಿನ ಪ್ರಸಿದ್ದವಾದ ಶ್ರೀ ಗಾಯತ್ರಿ ಜ್ಯುವೆಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಮತ್ತು ಮೋಹಿನಿ ಎ.ಆಚಾರ್ಯ ಅವರ ಪುತ್ರಿ ವಿದುಷಿ ಕು|| ಅನಘ ಆಚಾರ್ಯ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಇದೇ ಆಗಸ್ಟ್ 20 ರಂದು ಭಾನುವಾರ ಸಂಜೆ 5-30 ಕ್ಕೆ ಜರಗಲಿದೆ.


ತೀರ್ಥಹಳ್ಳಿಯ ಶ್ರೀ ಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಆದಿ ಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮಿ ಬಿ.ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ಅಧ್ಯಕ್ಷ ಎಂ.ಎಸ್ ಶಂಕರನಾರಾಯಣ ಅವರು ವಹಿಸಲಿದ್ದಾರೆ. ಮಂಗಳೂರು ಭರತಾಂಜಲಿ ನೃತ್ಯ ಸಂಸ್ಥೆಯ ನಿರ್ದೇಶಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಂಪತಿ ವಿದುಷಿ ಪ್ರತಿಮಾ ಶ್ರೀಧರ್ ಮತ್ತು ವಿದ್ವಾನ್ ಶ್ರೀಧರ್ ಹೊಳ್ಳ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.


ವಿದುಷಿ ಅನಘ ಆಚಾರ್ಯ ಪರಿಚಯ :
ವಿದುಷಿ ಅನಘ ಆಚಾರ್ಯ ತನ್ನ ಮೂರನೇ ವಯಸ್ಸಿನಿಂದ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ. ಇವಳ ಪ್ರತಿಭೆಗೆ ಹೆತ್ತವರ ಪ್ರೋತ್ಸಾಹವೇ ಪುಷ್ಟಿ. ತಂದೆ ಅನಂತ ಪದ್ಮನಾಭ ಆಚಾರ್ಯ ತಾಯಿ ಶ್ರಿಮತಿ ಮೋಹಿನಿ ಅನಂತ ಆಚಾರ್ಯ ಹಾಗೂ ಸಹೋದರ ಚಿ.ಅಮೋಘ ಆಚಾರ್ಯ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ, ಪದವಿ (ಬಿ.ಎಸ್.ಸಿ. ಸೈಕಾಲಜಿ)ಯನ್ನು ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್, ಮೈಸೂರಿನಲ್ಲಿ ಪೂರ್ಣಗೊಳಿಸಿದ್ದಾಳೆ.


ಭರತನಾಟ್ಯ ತರಬೇತಿಯನ್ನು ಕಳೆದ 18 ವರ್ಷಗಳಿಂದ ತೀರ್ಥಹಳ್ಳಿಯ ಪ್ರತಿಷ್ಟಿತ ಶ್ರೀ ಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ವಿದುಷಿ ಶ್ರೀಲತಾ ಪ್ರೀತಂ ಗಂಧರ್ವ ಇವರಿಂದ ಪಡೆಯುತ್ತಿದ್ದು, ನಿರಂತರ ಪರಿಶ್ರಮ ಹಾಗೂ ಸತತ ಅಭ್ಯಾಸದಿಂದ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ಅಂತಿಮ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಸೀನಿಯರ್ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ವಿದ್ವತ್ ಅಂತಿಮ ದರ್ಜೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಲಕ್ಷ್ಮಿ ಶಂಕರನಾರಾಯಣ ಇವರ ಬಳಿ ಅಭ್ಯಸಿಸಿ ಜೂನಿಯರ್ ಹಂತದ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಪಡೆದಿದ್ದಾಳೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ‘ ಬಾಲ ಪ್ರತಿಭೆ, ‘ಕಲಾ ಪ್ರತಿಭೋತ್ಸವ’ ಸ್ಪರ್ಧೆ, ‘ ಗುರುದೇವ ಡ್ಯಾನ್ಸ್ ಅಂಡ್ ಮ್ಯೂಸಿಕ್ ನ್ಯಾಷನಲ್ ಫೆಸ್ಟಿವಲ್ ‘, ‘ಹೆಜ್ಜೆಗೊಂದು ಗೆಜ್ಜೆ’, ಸ್ವರ ಸನ್ನಿಧಿ ಟ್ರಸ್ಟ್ ಬೆಂಗಳೂರು ‘ ನಿಸಾರ್ ಗೀತ ಸಂಭ್ರಮೋತ್ಸವ’, ‘ ಶಂಕರವಾಹಿನಿ’, ರಾಜ್ಯ ಮಟ್ಟದ ‘ಪ್ರತಿಭಾ ಕಾರಂಜಿ’ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯ ಕಲಾವಿದರುಗಳಿಂದ ಮೆಚ್ಚುಗೆ ಆಶೀರ್ವಾದ ಪಡೆದು ಬಹುಮಾನ ಗಳಿಸಿದ ಕೀರ್ತಿ ಇವಳಿಗೆ ಸಂದಿದೆ.


ಕರ್ನಾಟಕ ಸರ್ಕಾರ ನಡೆಸಿದ ‘ ಕಲಾ ಶ್ರೀ’ ಪುರಸ್ಕಾರ ವಿಭಾಗಕ್ಕೆ ಆಯ್ಕೆ ಆಗಿರುತ್ತಾಳೆ. ಜೀ ಕನ್ನಡ ವಾಹಿನಿ ನಡೆಸುವ ‘ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ‘ ರಿಯಾಲಿಟಿ ಶೋ ನಲ್ಲೂ ಭಾಗವಹಿಸಿದ್ದಾಳೆ. ‘ ಪ್ರೀತಿಯಿಂದ’ ಧಾರಾವಾಹಿ, ‘ ಶೇಷು’, ‘ಅಮ್ಮ ನಾನ್ ರ್ಯಾಂಕ್ ಬರ್ತೀನಿ’ ಚಲನಚಿತ್ರಗಳಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದಾಳೆ.
ಸುಮುಖ ಸಂಸ್ಥೆಯ ವತಿಯಿಂದ ಚಂದನ ವಾಹಿನಿಯ’ ಈ ಮಣ್ಣು ನಮ್ಮದು’ ಕಾರ್ಯಕ್ರಮ, ಶ್ರೀ ಕ್ಷೇತ್ರ ಕೈವಾರ, ಉಡುಪಿ, ಹಾಸನ, ಚಿತ್ರದುರ್ಗ, ಹೊರನಾಡು, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಅನೇಕ ಕಾರ್ಯಕ್ರಮ ನೀಡಿರುತ್ತಾಳೆ.

‘ ಕಾಳಿಂಗ ಮರ್ಧನ ‘, ‘ ಗೀತ- ಗೋವಿಂದ’, ‘ ಸೀತಾ ಕಲ್ಯಾಣ’, ಲವ- ಕುಶ’, ‘ಪರಶುರಾಮ’ ಮುಂತಾದ ನೃತ್ಯ ರೂಪಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ. ‘ ಪುಣ್ಯಕೋಟಿ’ ನೃತ್ಯ ರೂಪಕದಲ್ಲಿ ಕರುವಿನ ಪಾತ್ರ ನಿರ್ವಹಿಸಿ ಉತ್ತಮ ಪ್ರದರ್ಶನ ನೀಡಿ ಅಪಾರ ಜನ ಮೆಚ್ಚುಗೆ ಗಳಿಸಿರುತ್ತಾಳೆ. ಅನಘ ವಿಧುಷಿ ಶ್ರೀಲತಾ ಪ್ರೀತಮ್ ಗಂಧರ್ವ ಅವರ ಶಿಷ್ಯೆ.

Leave A Reply

Your email address will not be published.

error: Content is protected !!