RIPPONPETE ; ಶರನ್ನವರಾತ್ರಿಯ ನವಮಿಯಂದು ಇಷ್ಟಾರ್ಥ ಪೂಜೆ ಸಲ್ಲಿಸಿ ಭಕ್ತರು ತಮ್ಮ ಜೀವನ ಪರ್ಯಂತ ಆರೋಗ್ಯ-ಶಾಂತಿ-ನೆಮ್ಮದಿ ಲಭಿಸಲೆಂದು ಯಾಚಿಸುತ್ತಾರೆ. ಮಹಾನವಮಿಯ ಸುದಿನದಂದು ನವವಿಧ ಭಕ್ತಿಯಿಂದ ಬಿನ್ನವಿಸಿಕೊಳ್ಳುವ ಪ್ರಾರ್ಥನೆಯು ಫಲ ನೀಡಲಿ ಎಂದು ಶ್ರೀಗಳವರು ಪ್ರವಚನದಲ್ಲಿ ತಿಳಿಸಿದರು.
ಸದಾಕಾಲ ಸರ್ವರಿಗೂ ಕ್ಷೇಮವನ್ನುಂಟು ಮಾಡಲಿ ಎಂದು ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹರಸಿ, ಆಶೀರ್ವದಿಸಿದರು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಶರನ್ನವರಾತ್ರಿ ‘ಮಹಾನವಮಿ’ ಉತ್ಸವದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವಪರಂಪರೆಯಂತೆ ಜಿನಾಗಮೋಕ್ತ ಪೂಜಾ ವಿಧಿ-ವಿಧಾನದಲ್ಲಿ ಶೋಡೋಪಚಾರ ಪೂಜೆ, ಸ್ವರ್ಣಾಲಂಕಾರದಿಂದ ಶೋಭಿಸಿದ ಅಭೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತಿ, ಶ್ರದ್ಧೆಗಳಿಂದ ಊರ ಪರವೂರ ಭಕ್ತರು ಪ್ರಾರ್ಥನೆ, ಕಾಣಿಕೆಯನ್ನು ಸಮರ್ಪಿಸಿದರು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರು ಉಪಸ್ಥಿತರಿದ್ದರು.
ಕುಮದ್ವತಿ ತೀರ್ಥದಿಂದ ಅಗ್ರೋದಕ ತಂದು ಜಿನಾಲಯಗಳ ಸನ್ನಿಧಿಗೆ ಸಮರ್ಪಿಸಲಾಯಿತು. ಊರ, ಪರವೂರ ಭಕ್ತವೃಂದದವರು ಮಹಾನವಮಿ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು. ನಂತರ ಗಜ, ಆಶ್ವ ಪೂಜೆಯನ್ನು ಊರಿನಲ್ಲಿ ಹಾಗೂ ಶ್ರೀ ಮಠದ ಆವರಣದಲ್ಲಿ ನೆರವೇರಿಸಲಾಯಿತು. ಅಷ್ಟಕನ್ಯೆ ಪೂಜೆಯನ್ನು ಸಹ ನೆರವೇರಿಸಲಾಯಿತು.
ಶ್ರೀಮಠದ ವಾಹನಗಳಿಗೆ ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಪೂಜೆ ನೆರವೇರಿತು.
ಅಷ್ಟಾವಧಾನ, ಸಂಗೀತ, ನೃತ್ಯ, ಗಮಕ, ಗದ್ಯ, ವಾದ್ಯಗೋಷ್ಠಿ, ಜಿನಭಜನೆ ರಾತ್ರಿ ನೆರವೇರಿತು. ಜಿನಾಲಯಗಳ ಅಲಂಕಾರ, ಜಿನವಿಗ್ರಹಗಳ ಅಲಂಕಾರ ಸುಶೋಭಿತವಾಗಿ ಕಂಡು ಭಕ್ತರು ಧನ್ಯತಾಭಾವ ತಳೆಯುವಂತಾಯಿತು.