ಶ್ರೀ ರಾಮಕೃಷ್ಣ ವಿದ್ಯಾಲಯದ ಹೋರಾಟಕ್ಕೆ ಜಯ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ – ಪೋಷಕರು ನಿರಾಳ

Written by Mahesha Hindlemane

Published on:

ರಿಪ್ಪನ್‌ಪೇಟೆ ; 2024–25ನೇ ಶೈಕ್ಷಣಿಕ ಸಾಲಿನ ಶ್ರೀ ರಾಮಕೃಷ್ಣ ವಿದ್ಯಾಲಯ, ರಿಪ್ಪನ್‌ಪೇಟೆಯ 10ನೇ ತರಗತಿ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಶಾಲೆಯ ಆಡಳಿತ ಮಂಡಳಿಯ ಸತತ ಹೋರಾಟದ ಫಲವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲಾಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿದ್ಯಾರ್ಥಿಗಳ ಪರೀಕ್ಷಾ ನೋಂದಣಿ ಹಾಗೂ ಶುಲ್ಕ ಪಾವತಿ ಶ್ರೀ ರಾಮಕೃಷ್ಣ ವಿದ್ಯಾಲಯದ ಹೆಸರಲ್ಲೇ ಆಗಿದ್ದು, ಪ್ರವೇಶ ಪತ್ರದಲ್ಲಿಯೂ ಶಾಲೆಯ ಹೆಸರೇ ನಮೂದಾಗಿತ್ತು. ಆದರೆ ಕೆಲ ಕಾನೂನು ತೊಡಕುಗಳಿಂದಾಗಿ ಮೂಲ ಅಂಕಪಟ್ಟಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಹೆಸರು ದಾಖಲಾಗಿತ್ತು. ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಶಿಕ್ಷಣ ಇಲಾಖೆಯೊಂದಿಗೆ ನಿರಂತರವಾಗಿ ಹೋರಾಟ ನಡೆಸಿ, ನ್ಯಾಯಾಲಯದ ಮೊರೆ ಹೋಗಿದ್ದು, ಸುಮಾರು ನಾಲ್ಕು ತಿಂಗಳ ಸತತ ಪ್ರಯತ್ನದ ಬಳಿಕ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದೆ.
ಅಂಕಪಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಸಂಸ್ಥಾಪಕ ಅಧ್ಯಕ್ಷ ದೇವರಾಜ್, “ನಮ್ಮ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಬೇರೆ ಶಾಲೆಗಳ ಪಾಲಾಗಬಾರದು ಎಂಬ ನಿಟ್ಟಿನಲ್ಲಿ ಸತ್ಯದ ಪರವಾಗಿ ನಡೆಸಿದ ಹೋರಾಟದಲ್ಲಿ ಗೆಲುವು ನಮ್ಮದಾಗಿದೆ. ಇನ್ನು ಮುಂದೆ ಪೋಷಕರು ಆತಂಕಪಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಕಲಗೋಡು ರತ್ನಾಕರ್, “ಮಕ್ಕಳ ಭವಿಷ್ಯಕ್ಕೆ ಅತ್ಯಂತ ಮುಖ್ಯವಾದ ಅಂಕಪಟ್ಟಿ ಪಡೆಯಲು ಶಾಲಾ ಆಡಳಿತ ಮಂಡಳಿ ಶಿಕ್ಷಣ ಇಲಾಖೆಯವರೊಂದಿಗೆ ಹೋರಾಟ ನಡೆಸಿ, ನ್ಯಾಯಾಲಯದ ಮೊರೆ ಹೋಗಿರುವುದು ಶ್ಲಾಘನೀಯ. ಅಂತಿಮವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವಲ್ಲಿ ಶಾಲೆ ಯಶಸ್ವಿಯಾಗಿದೆ” ಎಂದು ಹೇಳಿದರು.

ಈ ಹಿಂದೆ ಅಂಕಪಟ್ಟಿ ಗೊಂದಲದಿಂದ ಅನೇಕ ಪೋಷಕರು ಮಕ್ಕಳ ಮುಂದಿನ ಶಿಕ್ಷಣದ ಬಗ್ಗೆ ಆತಂಕಗೊಂಡಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಚಿವರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದೀಗ ಎಲ್ಲಾ ಗೊಂದಲಗಳು ನಿವಾರಣೆಯಾಗಿದ್ದು, ಪೋಷಕರು ನಿರಾಳರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಸ್ಪಂದಿಸಿದ ಕಲಗೋಡು ರತ್ನಾಕರ್ ರವರನ್ನು ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಮಧುಸೂದನ್, ಹಿರಿಯಣ್ಣ ಭಂಡಾರಿ, ಪೋಷಕರು ಹಾಗೂ ಶಾಲೆಯ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

Leave a Comment