ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಎನ್.ಡಿ.ಹೆಗಡೆ

Written by malnadtimes.com

Published on:

SAGARA ; ಆನಂದಪುರ ನಿವಾಸಿಯಾಗಿರುವ ಹೊಸನಗರ ತಾಲೂಕಿನ ಚಿಕ್ಕಜೇನಿ ಪ್ರೌಢ ಶಾಲಾ ಶಿಕ್ಷಕ ಎನ್.ಡಿ.ಹೆಗಡೆಗೆ ಅಕ್ಷರ ದೀಪ ಪೌಂಡೇಶನ್ (ರಿ) ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿದೆ.

WhatsApp Group Join Now
Telegram Group Join Now
Instagram Group Join Now

ಸೆ‌.29 ರ ಭಾನುವಾರ ಬೆಳಿಗ್ಗೆ ಶಿರಸಿಯಲ್ಲಿ ನಡೆಯುವ ಮಲೆನಾಡ ಅಕ್ಷರೋತ್ಸವ -2024 ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಜಿಲ್ಲಾ ಘಟಕ ಉತ್ತರ ಕನ್ನಡ ಇದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಇವರಿಗೆ ಶಿಕ್ಷಣ ಮತ್ತು ಸಮಾಜ ಸೇವಾ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಎನ್.ಡಿ.ಹೆಗಡೆಯವರು ಚಿಕ್ಕಜೇನಿ ಪ್ರೌಢ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ತಮ್ಮ ವಿಷಯದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100 ಬರುವಂತೆ ಗುಣ ಮಟ್ಟದ ಬೋಧನೆ, ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ, ಹಾಡು, ಭಾಷಣ, ಪ್ರಬಂಧ, ಕೋಲಾಟ, ಐತಿಹಾಸಿಕ ಮತ್ತು ಸಾಮಾಜಿಕ ಮತ್ತು ಪರಿಸರ ಜಾಗೃತಿ ನಾಟಕ ಇತ್ಯಾದಿಗಳಲ್ಲಿ ತರಬೇತಿ ನೀಡಿ ಜಿಲ್ಲಾ  ಮಟ್ಟ ಮತ್ತು ವಿಭಾಗ ಮಟ್ಟದವರೆಗೆ ಬಹುಮಾನ ದೊರಕಿಸಿಕೊಟ್ಟಿದ್ದಾರೆ.

ಶಾಲೆಯ ಕಾರಿಡಾರ್ ನಲ್ಲಿ ಮಳೆಗಾಲದಲ್ಲಿ ವಿಪರೀತ ಕೆಸರು ಉಂಟಾಗಿ ವಿದ್ಯಾರ್ಥಿಗಳು ಓಡಾಡುವುದು ಕಷ್ಟ ಎಂಬುದನ್ನು ಮನಗಂಡು ಎಸ್.ಡಿ.ಎಂ.ಸಿ ಮತ್ತು ಸಹೋದ್ಯೋಗಿಗಳ ನೆರವು ಪಡೆದು ಶಾಲೆಯ ಬಿಡುವಿನ ಅವಧಿಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಸಿಮೆಂಟ್, ಮರಳು, ಜಲ್ಲಿ ಬಳಸಿ ಇಂಟರ್‌ಲಾಕ್ ತಯಾರಿಸಿ ಅಳವಡಿಸಿ ಇಡೀ ಜಿಲ್ಲೆಯ ಎಲ್ಲಾ ಶಾಲೆಗಳ ಗಮನ ಸೆಳೆದಿದ್ದಾರೆ.

ರಜೆಯ ಸಮಯದಲ್ಲಿ ರಾಜ್ಯದ ಬೇರೆ ಬೇರೆ ಕಡೆ ಆಮಂತ್ರಣ ಸ್ವೀಕರಿಸಿ ಕೊಳವೆಬಾವಿ ಪಾಯಿಂಟ್ ಮಾಡಿ ಯಶಸ್ಸು ಗಳಿಸಿ ಸಾವಿರಾರು ರೈತರಿಗೆ ನೆರವು ನೀಡಿದ್ದಾರೆ. ಆನಂದಪುರದಲ್ಲಿ ರಾಯಲ್ ಕ್ಲಬ್ ಎಂಬ ಸಮಾಜ ಸೇವಾ ಸಂಸ್ಥೆಗೆ ಮಾರ್ಗದರ್ಶನ ನೀಡಿ ನೂರಾರು ಸಮಾಜ ಮುಖಿ ಕಾರ್ಯಕ್ಕೆ ಪ್ರೇರಣೆ ನೀಡಿದ್ದಾರೆ. ಯಕ್ಷಗಾನ ತಾಳಮದ್ದಲೆ, ಗಮಕ ವ್ಯಾಖ್ಯಾನ, ಭಾವೈಕ್ಯತೆ ಮೂಡಿಸುವ ಭಾಷಣ ,ಪ್ರೌಢ ಶಾಲೆಯ ಕನ್ನಡ ಪಠ್ಯ ಪುಸ್ತಕದ ಹಳಗನ್ನಡ ಕಾವ್ಯ ಭಾಗ ಮತ್ತು ಜಾನ ಪದ ಕವನಗಳ ಸುಲಭ ಅರ್ಥೈಸುವಿಕೆಗೆ ಪೂರಕವಾಗಿ ಕಲಾವಿದರ ಸಹಾಯ ಪಡೆದು ಯೂ ಟ್ಯೂಬ್ ಮೂಲಕ ಪಾಠ ನೀಡಿದ್ದಾರೆ.

ಸಾವಿರಾರು ಸ್ವರಚಿತ ಕವನ ರಚಿಸಿದ ಇವರಿಗೆ ಯಲ್ಲಾಪುರದ ಸಮಾಜ ಸೇವಾ ಸಂಸ್ಥೆ ಜಲ ರತ್ನ ಕವಿ ಎಂಬ ಬಿರುದು ನೀಡಿ ಗೌರವಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ ವಿಶಿಷ್ಟ ಸಾಧನೆಗೆ ಈಗ ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Leave a Comment