ನಿತ್ಯ ನಿರಂತರ ಭಕ್ತರಿಂದ ಜಿನಾರಾಧನೆ | ಹೊಂಬುಜ ಕ್ಷೇತ್ರದ ಮಹಿಮೆ ಅಪಾರ ; ಶ್ರೀಗಳು

Written by malnadtimes.com

Published on:

RIPPONPETE ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯ ಮಹಿಮೆ ಅಪಾರವಾದುದು. ಇಲ್ಲಿಯ ಗುರುಕುಲ ಶ್ರೀ ಕುಂದಕುಂದ ವಿದ್ಯಾಪೀಠದಲ್ಲಿ ಜ್ಞಾನಾರ್ಜನೆಗೈದವರು ಉನ್ನತ ಪದವಿಯಲ್ಲಿ ಸೇವೆ ಸಲ್ಲಿಸುವಂತಾದರು ಎಂದು ಕಂಬದಹಳ್ಳಿ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಮಗೆ ಸಮರ್ಪಿಸಿದ ಗುರುಭಕ್ತಿ ಪ್ರತೀಕ ಅಭಿನಂದನಾ ಗೌರವ ಸ್ವೀಕರಿಸಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ  ಆಯೋಜಿಸಲಾಗಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಆಧ್ಯಾತ್ಮ ಚಿಂತನ ಮಂಥನಕ್ಕೆ ಯೋಗ್ಯ ಪುಣ್ಯಸ್ಥಳವಾಗಿದ್ದು, ಭಕ್ತರು ನಿತ್ಯ ನಿರಂತರ ಜಿನಾರಾಧನೆಯ ಮೂಲಕ ನವಚೈತನ್ಯ ಪಡೆಯುತ್ತಾರೆಂದು ಹೇಳುತ್ತಾ, ಇಂದ್ರಧ್ವಜ ವಿಧಾನ ವಿಶಿಷ್ಟ ಆರಾಧನೆಯಾಗಿದ್ದು, ಜೈನ ಧರ್ಮದ ಉಪದೇಶಗಳು ಸುಗಮ ಜೀವನಕ್ಕೆ ಸೋಪಾನ ಎಂದು ಪ್ರವಚನವಿತ್ತ ಅವರು ಇಪ್ಪತ್ತೈದು ಸಂವತ್ಸರಗಳನ್ನು ಶ್ರೀಕ್ಷೇತ್ರ ಕಂಬದಹಳ್ಳಿ ಶ್ರೀಮಠದ ಪೀಠಾಧೀಶರಾಗಿ ಯಶಸ್ವಿಯಾಗಿ ಧಾರ್ಮಿಕ ಸೇವೆಯ ಸಮರ್ಪಿಸಿಕೊಂಡ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು “ಜೈನ ವಿದ್ಯಾಭೂಷಣ” ಎಂಬ ಗೌರವ ಪ್ರಶಸ್ತಿಯನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಕಂಬದಹಳ್ಳಿಯ ಪ್ರಾಚೀನ ಜಿನಾಲಯಗಳ ಸಂರಕ್ಷಣೆ, ಜೀರ್ಣೋದ್ಧಾರ ಹಾಗೂ ಗುರುಕುಲದ ಮೂಲಕ ವಿದ್ಯಾರ್ಜನೆ ಮಾಡುವ ಅವಕಾಶ ಕಲ್ಪಿಸಿರುವ ಶ್ರೀಗಳು ಎಲ್ಲ ಭಟ್ಟಾರಕರಿಗೆ ಆದರ್ಶಪ್ರಾಯರು ಎಂಬ ಗೌರವ ನುಡಿಗಳನ್ನು ಹೇಳಿದರು.

ಇಂದ್ರಧ್ವಜ ವಿಧಾನದಲ್ಲಿ ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿ, ಆರ್ಯಿಕಾ ಶ್ರೀ 105 ಪದ್ಮಶ್ರೀ ಮಾತಾಜಿ ದಿವ್ಯ ಉಪಸ್ಥಿತಿಯಲ್ಲಿ ಆರಂಭಗೊಂಡವು. ಸೋಂದಾ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ, ಸಿಂಹನಗದ್ದೆ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿ, ನಾಂದನಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಜಿನಸೇನಾ ಭಟ್ಟಾರಕ ಮಹಾಸ್ವಾಮೀಜಿಯವರು ತಮ್ಮ ಪ್ರವಚನದಲ್ಲಿ ಆರಾಧನೆಯ ಮಹತ್ವವನ್ನು ತಿಳಿಸಿದರು.

ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರರವರು ಶ್ರೀಕ್ಷೇತ್ರದ ಶ್ರೀ ಪದ್ಮಾವತಿ ದರ್ಶನ ಪಡೆದು ಇಂದ್ರಧ್ವಜ ವಿಧಾನ ವೀಕ್ಷಿಸಿದರು. ಶ್ರೀಗಳವರು ಆಶೀರ್ವದಿಸಿ ಹರಸಿದರು.

ಇಂದ್ರಧ್ವಜ ವಿಧಾನ ವಿವರವುಳ್ಳ ಕೃತಿಯನ್ನು (ಸಿದ್ಧಾಂತಕೀರ್ತಿ ಪ್ರಕಾಶನದಿಂದ ಪ್ರಕಟಿತ) ಲೋಕಾರ್ಪಣೆಗೊಳಿಸಲಾಯಿತು.

Leave a Comment