ಹೊಸನಗರ ; ತಂತ್ರಜ್ಞಾನ ದಿನದಿನಕ್ಕೂ ಬೆಳವಣಿಗೆ ಹೊಂದುತ್ತಿದೆ. ಇಂತಹ ಸಂದರ್ಭದಲ್ಲಿ ಕೇವಲ ಸಾಂಪ್ರದಾಯಿಕ ಮಾದರಿಯ ಶಿಕ್ಷಣಕ್ಕೆ ಕಟ್ಟುಬೀಳದೆ ಕಲಿಕೆಯಲ್ಲಿ ತಂತ್ರಜ್ಞಾನ ಅಳವಡಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ಈಡಿಗರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ದಿನಾಚರಣೆ ಹಾಗೂ ಅಂಗನವಾಡಿಗಳಿಗೆ ಟಿವಿ ವಿವರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಕಲಿಕೆಗೆ ಸಹಕಾರಿಯಾಗಲಿದೆ ಎನ್ನುವ ಕಾರಣಕ್ಕೆ ಪ್ರತಿ ಅಂಗನವಾಡಿಗೆ ಟಿವಿ ನೀಡಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಎಳೆವೆಯಿಂದಲೇ ಕಲಿಕೆಯಲ್ಲಿ ತೊಡಗಬೇಕಾದ ಪರಿಸ್ಥಿತಿ ಇದೆ. ಸಾಂಪ್ರದಾಯಿಕ ಶಿಕ್ಷಣದಲ್ಲಿ ತಂತ್ರಜ್ಞಾನ ಒಳಗೊಂಡ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಒದಗಿಸುತ್ತಿರುವ ಎಲ್‌ಇಡಿಟಿವಿಯಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆ ಹಾಗೂ ಶೈಕ್ಷಣಿಕ ತಳಪಾಯಕ್ಕೆ ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಇದರ ಸಮರ್ಪಕ ಬಳಕೆ ಮಾಡಿಕೊಂಡು ಮಕ್ಕಳ ಮಾನಸಿಕ ಪ್ರಗತಿಗೆ ಕಾರಣವಾಗಬೇಕು. ಕೋವಿಡ್ ಸಂಕಷ್ಟದ ಸಮಯದಲ್ಲಿ ದೇಶವ್ಯಾಪಿಯಾಗಿ ಅಂಗನವಾಡಿ ಕಾರ್ಯಕರ್ತೆಯರು ಸಲ್ಲಿಸಿದ ಸೇವೆ ಅನನ್ಯವಾದದ್ದು, ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿ ಮಾದರಿಯಾದರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕೆಪಿಎಸ್ ಶಾಲೆಗಳ ಆರಂಭದಿಂದ ಅಂಗನವಾಡಿಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂಬ ವದಂತಿಯಲ್ಲಿ ಯಾವುದೇ ಹುರುಳಿಲ್ಲ. ಸರ್ಕಾರ ಅಂಗನವಾಡಿಗಳನ್ನು ಮುಚ್ಚುವ ಯಾವುದೇ ಉದ್ದೇಶ ಹೊಂದಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ಎಲ್‌ಇಡಿ ಟಿ.ವಿ.ಗಳನ್ನು ನೀಡುವುದರಿಂದ ಮೃದುವಾದ ಮಕ್ಕಳ ಮನಸ್ಸು ವಿದ್ಯೆಯ ಕಡೆಗೆ ಗಮನ ಹರಿಸಲು ಸಹಕಾರಿಯಾಗಲಿದೆ. ಯಾವುದೇ ಕಾರಣಕ್ಕೂ ಅಂಗನವಾಡಿಯನ್ನು ಮುಚ್ಚುವುದಿಲ್ಲ. ಅದರ ಬದಲಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಬಿ.ಚಿದಂಬರ ಮಾತನಾಡಿದರು.
ಎಲ್ಲಾ ಅಂಗನವಾಡಿಗಳಿಗೂ ಎಲ್‌ಇಡಿ ಟಿವಿ ವಿತರಿಸಲಾಯಿತು.

ಹೊಸನಗರದ ಸಿಡಿಪಿಓ ಕೆ.ಜಿ.ಗಾಯತ್ರಿ, ತಹಸೀಲ್ದಾರ್ ಎಚ್.ಜೆ. ರಶ್ಮಿ, ಬಿಇಓ ಎಚ್.ಆರ್.ಕೃಷ್ಣಮೂರ್ತಿ, ಪ.ಪಂ. ಮುಖ್ಯಾಧಿಕಾರಿ ಹರೀಶ್, ಸಿಡಿಪಿಓ ಕಚೇರಿಯ ಅಧೀಕ್ಷಕ ರಾಜು, ಒಕ್ಕೂಟದ ಸಂಘಟನ ರವೀಂದ್ರ ಸಾಗರ್ ಮತ್ತಿತರರಿದ್ದರು.