ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ವಿಶ್ವಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವ ಪರಂಪರೆಯ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಹೊಂಬುಜ ಶ್ರೀ ಜೈನ ಮಠ, ಸಂಸ್ಥಾನದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ 12.53 ಗಂಟೆಗೆ (ಮೂಲಾ ನಕ್ಷತ್ರ) ದೇವರ ಶ್ರೀ ರಥಾರೋಹಣ ನಡೆಯಿತು.

ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು, ಸಸಂಘ, ಆರ್ಯಿಕೆಯರು, ಕಂಬದಹಳ್ಳಿ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಉಪಸ್ಥಿತರಿದ್ದರು.

ಭಕ್ತವೃಂದದವರು ಕರ್ನಾಟಕ, ತಮಿಳುನಾಡು ಆಂದ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ದೆಹಲಿ, ಮಧ್ಯಪ್ರದೇಶಗಳಿಂದ ಆಗಮಿಸಿ ಶ್ರೀ ಪದ್ಮಾವತಿ ದೇವಿ ರಥಯಾತ್ರೆಯ ಶ್ರೀ ವಿಹಾರದಲ್ಲಿ ಪಾಲ್ಗೊಂಡರು.

ವಾದ್ಯಗೋಷ್ಠಿ, ಸಾಂಪ್ರದಾಯಿಕ ಚಂಡೆವಾದನ, ಶಂಖ, ಸ್ಯಾಕ್ಸೋಪೋನ್ ಜೈನ ಧರ್ಮೀಯ ವಾರ್ಷಿಕ ರಥೋತ್ಸವ ಸಂಭ್ರಮಕ್ಕೆ ಪೂರಕವಾಗಿದ್ದವು. ಭಕ್ತರಿಗೆ ಉಪಹಾರ, ಭೋಜನ, ವಾಸ್ತವ್ಯ ವ್ಯವಸ್ಥೆ ಶಿಸ್ತುಬದ್ಧವಾಗಿತ್ತು.

ಸ್ವರ್ಣ ಮಂಟಪ ಸಮರ್ಪಣೆ ;
ಲೋಕಮಾತೆ ಶ್ರೀ ಪದ್ಮಾವತಿ ದೇವಿ ಗರ್ಭಗುಡಿಯಲ್ಲಿ ವಿನೂತನ ಶೈಲಿಯ ಕಲಾನೈಪುಣ್ಯತೆಯ ‘ಸ್ವರ್ಣ ಮಂಟಪ” ವನ್ನು ನಿರ್ಮಿಸಿ, ಶ್ರೀ ಪದ್ಮಾವತಿ ದೇವಿಯವರಿಗೆ ಪೂಜ್ಯ ಶ್ರೀಗಳವರು ಸಮರ್ಪಿಸಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

ವಿಶ್ವಶಾಂತಿ, ಸಮಾಜದಲ್ಲಿ ಅನ್ಯೋನ್ಯತೆ ಇನ್ನಷ್ಟು ಬೆಳೆಯಲೆಂದು ಶ್ರೀಗಳವರು ತಿಳಿಸಿದರು. ಪರಿಸರ, ಪ್ರಕೃತಿ ಸಮೃದ್ಧವಾಗಿ, ಪ್ರಾಣಿ ಪಕ್ಷಿಗಳಿಗೂ ಆಹಾರ-ಆಶ್ರಯ-ನೀರು ನೀಡುವಂತಾಗಲಿ ಎಂದು ಭಕ್ತರಿಗೂ ಪರಿಸರ ಜಾಗೃತಿ ಜೈನ ಧರ್ಮದ ಮಹತ್ವದ ಅಂಗ ಎಂದು ತಿಳಿಯಬಯಸಿದರು.

ಶ್ರೀ ಕ್ಷೇತ್ರಪಾಲ ಜಟ್ಟಿಂಗರಾಯ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ದೇವರಿಗೆ ಚಿನ್ನದ ಕಿರೀಟವನ್ನು ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು.
