ಹೊಸನಗರ ; ತಾಲೂಕಿನ ಸಂಪೆಕಟ್ಟೆ ವಾಸಿ ‘ಗಾರ್ಗಿ ಕಾರೆಹಕ್ಲು’ ಅವರಿಗೆ 2020ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಲಭ್ಯವಾಗಿದೆ. ಇವರು ‘ಪರ್ಜನ್ಯ’ ಸಿನಿಮಾಕ್ಕೆ ರಚಿಸಿದ “ಮೌನವು ಮಾತಾಗಿದೆ” ಹಾಡಿಗೆ ಈ ಪ್ರಶಸ್ತಿ ಲಭಿಸಿದೆ.
ಗಾರ್ಗಿ ಕಾರೆಹಕ್ಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಪೆಕಟ್ಟೆ ನಿವಾಸಿಯಾಗಿದ್ದು, ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಉಪನ್ಯಾಸಕರಾಗಿ, ದೂರದರ್ಶನದ ಧಾರವಾಹಿಗಳಿಗೆ ಸಂಭಾಷಣೆಕಾರ, ನಿರ್ದೇಶಕರಾಗಿ ಮತ್ತು ಖಾಸಗಿ ವಾಹಿನಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
2013ರಲ್ಲಿ ಇವರು ನಿರ್ದೇಶಿಸಿದ ‘ಶೇಷು’ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿಯ ಮಾನ್ಯತೆ, 2018ರಲ್ಲಿ ನಿರ್ದೇಶಿಸಿದ ‘ಅನುತ್ತರ’ ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಡಿವಿಜಿ ಯವರ ‘ಮಂಕುತಿಮ್ಮನ ಖಗ್ಗ’ ಗುಂಡೋಪನಿಷತ್ ನ್ನು ಅಂತರ್ಜಾಲದ ಧಾರಾವಾಹಿಯಾಗಿ ಬರೆದು ನಿರ್ದೇಶಿಸಿದ್ದಾರೆ. ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಲ್ಲದೇ, ಒಂದು ಕಾದಂಬರಿ, ಎರಡು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಇತ್ತೇಚೆಗೆ ಇವರ ನಿರ್ದೇಶನದ ನಾಡಿನ ಹಿರಿಯ ಸಾಹಿತಿ ನಾ ಡಿಸೋಜ ಕುರಿತಾದ ‘ನಾಡಿ’ಸಾಕ್ಷ್ಯ ಚಿತ್ರ ಪ್ರದರ್ಶನ ಕಂಡಿದ್ದನ್ನು ನೆನಪಿಸಿಕೊಳ್ಳಬಹುದು. ಇವರು ಪ್ರಸ್ತುತ ಮಲೆನಾಡಿನ ಕಥೆ, ಕಲಾವಿದರು, ತಾಂತ್ರಿಕವರ್ಗವನ್ನು ಒಳಗೊಂಡು ಅನಿಮಿಷ ಚಿತ್ರ ಶಾಲೆ ತಂಡದ ಮೂಲಕ ಪ್ರಯೋಗಾತ್ಮಕ ಚಲನಚಿತ್ರ ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.