ಪ್ರವಾಸೋದ್ಯಮ ದಿನಾಚರಣೆ: “ಆಳಿದ ಮೇಲೂ ಉಳಿಯುವುದು ಸಾಧನೆ ಮಾತ್ರ” – ಸಚಿವ ಮಧು ಬಂಗಾರಪ್ಪ

Written by Koushik G K

Published on:

ಶಿವಮೊಗ್ಗ:ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ನೂತನವಾಗಿ ಪ್ರಾರಂಭಿಸಿರುವ ಜಾಲತಾಣವು ಜಿಲ್ಲೆಯ ವೈಶಿಷ್ಟ್ಯತೆಗಳನ್ನು ಒಟ್ಟುಗೂಡಿಸಿ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನೂತನ ವೆಬ್‌ಸೈಟ್‌ ಪ್ರಶಂಸೆ

“ಈ ಜಾಲತಾಣದಲ್ಲಿ ಶಿವಮೊಗ್ಗ ಜಿಲ್ಲೆಯ 61ಕ್ಕೂ ಹೆಚ್ಚು ಪ್ರವಾಸಿ ತಾಣಗಳ ವಿವರ, ಐತಿಹ್ಯ, ಜೋಗ ಜಲಪಾತ, ಕೊಡಚಾದ್ರಿ, ನಗರಕೋಟೆ, ವನ್ಯಜೀವಿ, ಸಸ್ಯಸಂಪತ್ತು ಸೇರಿದಂತೆ ನೂರಾರು ಚಿತ್ರ-ವೀಡಿಯೋ ತುಣುಕುಗಳನ್ನು ಅಳವಡಿಸಲಾಗಿದೆ. ಇದು ಜಿಲ್ಲೆಯ ವೈವಿಧ್ಯತೆಯನ್ನು ಜಗತ್ತಿನೆದುರು ತರುತ್ತದೆ” ಎಂದು ಅವರು ಪ್ರಶಂಸಿಸಿದರು.

ಸಾಧನೆ ಶಾಶ್ವತ: ಮಧು ಬಂಗಾರಪ್ಪ

“ಆಳಿದ ಮೇಲೂ ಶಾಶ್ವತವಾಗಿ ಉಳಿಯುವುದು ವ್ಯಕ್ತಿಯ ಸಾಧನೆ ಮಾತ್ರ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ 41 ಪ್ರವಾಸಿ ತಾಣಗಳ ಜೊತೆಗೆ ನನ್ನ ತಂದೆ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮ ಸೇರಿ 20 ಹೊಸ ತಾಣಗಳನ್ನು ಪಟ್ಟಿ ಮಾಡಿರುವುದು ನನಗೆ ಹೆಮ್ಮೆಯ ಸಂಗತಿ” ಎಂದರು.

ಅವರು ಜೋಗ ಜಲಪಾತದ ಅಭಿವೃದ್ದಿ, ಚಂದ್ರಗುತ್ತಿ ಪ್ರಾಧಿಕಾರ ರಚನೆ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತಹ ಪ್ರವಾಸೋದ್ಯಮ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಪ್ರವಾಸೋದ್ಯಮಕ್ಕೆ ₹200 ಕೋಟಿ ಯೋಜನೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, “ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ₹200 ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಜೋಗ ಜಲಪಾತದಲ್ಲಿ ರೋಪ್‌ವೇ, ಸಂಗೀತ ಕಾರಂಜಿ, ಜಿಪ್‌ಲೈನ್, ಗ್ಲಾಸ್‌ ಹೌಸ್, ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಕೊಡಚಾದ್ರಿಗೆ ಮೂಲಭೂತ ಸೌಕರ್ಯ ಕಲ್ಪನೆಗೂ ಆದ್ಯತೆ ನೀಡಲಾಗುತ್ತದೆ” ಎಂದರು.

ಜಿಲ್ಲಾಡಳಿತದ ಮಾಹಿತಿ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, “ಹೊಸ ಜಾಲತಾಣ ನಿರ್ಮಾಣದಲ್ಲಿ ಸ್ಥಳೀಯ ಪ್ರತಿಭಾವಂತರ ಸಲಹೆ ಬಳಸಲಾಗಿದೆ. ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರ ಚಿತ್ರಗಳು, ರೀಲ್ಸ್, ವೀಡಿಯೊಗಳನ್ನು ಬಳಸಲಾಗಿದೆ” ಎಂದರು.ಸಿಇಓ ಎನ್. ಹೇಮಂತ್ ಕುಮಾರ್ ಅವರು, “ಗುಡಿ ಕೈಗಾರಿಕೆ ಮತ್ತು ಸ್ಥಳೀಯ ಪ್ರವಾಸಿ ತಾಣಗಳ ಮಾಹಿತಿ ಕೂಡ ಸೇರಿಸಲಾಗಿದೆ” ಎಂದು ಹೇಳಿದರು.

ಸಾಂಸ್ಕೃತಿಕ ಛಾಯಾಚಿತ್ರ ಪ್ರದರ್ಶನ

ಕಾರ್ಯಕ್ರಮಕ್ಕೂ ಮುನ್ನ, ಕುವೆಂಪು ರಂಗಮಂದಿರ ಆವರಣದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಆಕರ್ಷಕ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಾಯಿತು. ಈ ಪ್ರದರ್ಶನವು ಐದು ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ., ಸಿಸಿಎಫ್ ಹನುಮಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಪ್ರೊಬೇಷನರಿ ಅಧಿಕಾರಿ ನಾಗೇಂದ್ರ ಬಾಬು, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಧರ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕಾರ

Leave a Comment