ಶಿವಮೊಗ್ಗ ; ಇತೀಚೆಗೆ ನಮ್ಮನ್ನಗಲಿದ ಪತ್ರಕರ್ತ ಮಿತ್ರರಾದ ಶಿವಮೊಗ್ಗ ನಂದನ್ ಮತ್ತು ಶಶಿಧರ್ ಅವರಿಗೆ ಇಂದು ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ನಂದನ್ ಮತ್ತು ಶಶಿಧರ್ ಉತ್ತಮ ಪತ್ರಕರ್ತರಾಗಿದ್ದರು. ಕ್ರಿಯಾಶೀಲರಾಗಿದ್ದರು. ಪತ್ರಕರ್ತರಿಗೆ ಇಂದು ಒತ್ತಡ ಹೆಚ್ಚಾಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ನಂದನ್ ಮತ್ತು ಶಶಿಧರ್ ಅತಿ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋಗಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಮಾತನಾಡಿ, ಪತ್ರಕರ್ತರು ನಿಧನರಾದಾಗ ಅವರ ಕುಟುಂಬಕ್ಕೆ ಸಹಾಯವಾಗಲಿ ಎಂದು ಪ್ರೆಸ್ ಟ್ರಸ್ಟ್ ಗ್ರೂಪ್ ವೊಂದನ್ನು ರೂಪಿಸಿದ್ದೇವೆ. ಇದರಲ್ಲಿ ಸದಸ್ಯರು ಪ್ರತಿ ತಿಂಗಳು 200 ರೂ. ಜಮಾ ಮಾಡುತ್ತಿದ್ದಾರೆ. ಈ ಹಣದಲ್ಲಿ ಮೃತರ ಕುಟುಂಬಕ್ಕೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು.
ನಂದನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿಗಳನ್ನು ಪ್ರೀತಿಸುತ್ತಿದ್ದ ವ್ಯಕ್ತಿ. ಶಶಿಧರ್ ಆಪ್ತಗೆಳೆಯ, ಮೃದು ಮನಸ್ಸಿನವ. ಇವರಿಬ್ಬರ ಅಕಾಲಿಕ ಮರಣ ನೋವು ತಂದಿದೆ ಎಂದರು.
ಐಎಂಎ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಪತ್ರಕರ್ತರು ವೃತ್ತಿಯ ಒತ್ತಡ ನಿಭಾಯಿಸುವ ಭರದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ. ನಿಮ್ಮ ಒತ್ತಡದ ಅರಿವು ನಮಗಿದೆ ಆದರೆ ಕಾಲಕಾಲಕ್ಕೆ ಆರೋಗ್ಯ
ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಮೊದಲು ಸುದ್ದಿ ಕೊಡುವ ಧಾವಂತದಲ್ಲಿರುವ ಪತ್ರಕರ್ತರು ಯಾವತ್ತೂ ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ. ಅವರಿಗೆ ನಿರಂತರ ಆರೋಗ್ಯ ತಪಾಸಣೆ ಅಗತ್ಯವಿದೆ. ಶಿವಮೊಗ್ಗ ನಂದನ್ ಮತ್ತು ಶಶಿಧರ್ ಅವರ ಅಕಾಲಿಕ ಮರಣ ನೋವು ತಂದಿದೆ. ಗೆಳೆಯರ ಸಾವು ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ ಎಂದರು.
ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಪತ್ರಕರ್ತರು ನಿಧನರಾದಾಗ ಮಾತ್ರ ಅವರ ಜೀವನ ಭದ್ರತೆ ಬಗ್ಗೆ ಮಾತನಾಡುತ್ತೇವೆ. ನಂದನ್ ಮತ್ತು ಶಶಿಧರ್ ಅಕಾಲಿಕ ಮರಣದಿಂದ ಕ್ಷೇತ್ರಕ್ಕೆ ನಷ್ಟವಾಗಿದೆ. ನಂದನ್ ಒಬ್ಬ ಪರಿಸರ ಹೋರಾಟಗಾರ ಮತ್ತು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು ಎಂದರು.
ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಮಚಂದ್ರ ಗುಣಾರಿ, ಹೊನ್ನಾಳಿ ಚಂದ್ರಶೇಖರ್, ಎಸ್.ವಿ. ರಾಜಮ್ಮ, ವೈದ್ಯ, ಆರಗ ರವಿ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಪದಾಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.