HOSANAGARA ; ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಲೂಕಿನ ನಾಗರಕೊಡಿಗೆಯ ತ್ರಿಣಿವೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲಾ 12 ನಿರ್ದೇಶಕರು ಅವಿರೋಧ ಆಯ್ಕೆಯಾದದ್ದು ವಿಶೇಷ.
ಗುರುವಾರ ನಡೆದ ಸಂಘದ ಚುನಾವನಾ ಪ್ರಕ್ರಿಯೆಯಲ್ಲಿ ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಹೆಚ್. ಎನ್. ವಿದ್ಯಾಧರ ಹಾಗು ಸತತ 3ನೇ ಬಾರಿಗೆ ಉಪಾಧ್ಯಕ್ಷರಾಗಿ ಎಸ್.ಡಿ. ಲಕ್ಷ್ಮಣಗೌಡ ಅವಿರೋಧ ಆಯ್ಕೆಯಾದರು.
ನೆಲ್ಲುಂಡೆ ಸಾಮಾನ್ಯ-ಸಾಲಗಾರರ ಕ್ಷೇತ್ರದಿಂದ ಎನ್.ಆರ್. ವರುಣ್, ಕಲ್ಲುವೀಡಿ ಅಬ್ಬಿಗಲ್ಲಿನ ಎಸ್‌ಟಿ/ಸಾಲಗಾರರ ಕ್ಷೇತ್ರದಿಂದ ಆರ್. ರಾಜಕುಮಾರ್, ತೊಗರೆ ಪ್ರವರ್ಗ ‘ಎ’ ಸಾಲಗಾರರ ಕ್ಷೇತ್ರದಿಂದ ಟಿ.ಎನ್. ಶ್ರೀಪತಿ, ಕುಂಬತ್ತಿ ಸಾಮಾನ್ಯ ಮಹಿಳೆ ಸಾಲಗಾರರ ಕ್ಷೇತ್ರದಿಂದ ರಾಜಶ್ರೀ ಎಸ್ ರಾವ್, ತ್ರಿಣಿವೆ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಜಿ.ಎನ್. ಸುಧೀರ್, ತ್ರಿಣಿವೆ ಎಸ್‌ಸಿ/ಸಾಲಗಾರರ ಕ್ಷೇತ್ರದಿಂದ ಹಾಲಮ್ಮ, ತ್ರಿಣಿವೆಯ ಸಾಮಾನ್ಯ ಮಹಿಳೆ/ಸಾಲಗಾರರ ಕ್ಷೇತ್ರದಿಂದ ವಿಜಯಲಕ್ಷ್ಮಿ, ಹನಿಯಾ ಸಾಮಾನ್ಯ/ಸಾಲಗಾರರ ಕ್ಷೇತ್ರದಿಂದ ಎಸ್.ಎನ್. ಗುರುರಾಜ, ನೆಲ್ಲುಂಡೆ ಸಾಮಾನ್ಯ/ಸಾಲಗಾರರ ಕ್ಷೇತ್ರದಿಂದ ಎಸ್.ಎಂ. ವಿನಾಯಕ, ಬಿಳ್ಳೋಡಿ ಪ್ರವರ್ಗ ‘ಬಿ’/ಸಾಲಗಾರರ ಕ್ಷೇತ್ರದಿಂದ ಹೆಚ್.ಪಿ. ಉದಯಗೌಡ, ತೊಗರೆ ಸಾಮಾನ್ಯ/ಸಾಲಗಾರರಲ್ಲದ ಕ್ಷೇತ್ರದಿಂದ ಹೆಚ್.ಎನ್. ವಿದ್ಯಾಧರ ಹಾಗು ಸಾಲಗೇರಿ ಸಾಮಾನ್ಯ/ಸಾಲಗಾರರ ಕ್ಷೇತ್ರದಿಂದ ಎಸ್.ಡಿ. ಲಕ್ಷ್ಮಣ ಅವಿರೋಧ ಆಯ್ಕೆಯಾಗಿದ್ದಾರೆ. ಇವರಲ್ಲಿ ಎಸ್.ಎಂ. ವಿನಾಯಕ, ವಿಜಯಲಕ್ಷ್ಮಿ, ಉದಯ, ಗುರುರಾಜ ನೂತನ ನಿರ್ದೇಶಕರಾಗಿ ಆಯ್ಕೆಯಾದವರು.
ನಂತರ, ತ್ರಿಣಿವೆ ಸಹಕಾರಿ ಸಂಘದ ನೂತನ ಅಧ್ಯಕ್ಷ ಮತ್ತು ಶಿಮೂಲ್ ಅಧ್ಯಕ್ಷರೂ ಆದ ಗುರುಶಕ್ತಿ ವಿದ್ಯಾಧರ್ ಪತ್ರಕರ್ತರೊಂದಿಗೆ ಮಾತನಾಡಿ, ಸಂಘ ಸ್ಥಾಪನೆಗೊಂಡು 75 ವಸಂತಗಳೇ ಸಂದಿದ್ದರೂ ಒಮ್ಮೆಯು ಚುನಾವಣೆ ಎದುರಿಸದೇ, ಪ್ರತಿ ಬಾರಿಯೂ ನಿರ್ದೇಶಕರು ಅವಿರೋಧ ಆಯ್ಕೆಯಾಗಿ ಆಡಳಿತ ಮಂಡಳಿ ರಚಿಸುವ ಮೂಲಕ ಸಂಘವು ರಾಜ್ಯದಲ್ಲೇ ವಿಶಿಷ್ಠ ಸಾಧನೆ ಮೆರೆದಿದೆ ಎಂದು ತಿಳಿಸಿದರು.
1949ರಲ್ಲಿ ಕೇವಲ ರೂ. 1900 ಮೊತ್ತ ಷೇರು ಬಂಡವಾಳದಲ್ಲಿ ಆರಂಭಗೊಂಡಿದ್ದ ಸಂಘವು ಇಂದು ವಾರ್ಷಿಕ ರೂ. 90 ಕೋಟಿ ವಹಿವಾಟು ನಡೆಸಿದೆ. ರೂ. 28 ಕೋಟಿ ಠೇವಣಿ ಸಂಗ್ರಹಿಸಿ, ರೂ. 25 ಕೋಟಿ ಸಾಲ ನೀಡಿದೆ. ಬೆಳೆಸಾಲ, ಕೃಷಿಸಾಲ, ವಾಹನ ಸಾಲ, ಅಡಮಾನ ಸಾಲ, ಖಾತೆ ಮೇಲಿನ ಸಾಲ ಸೇರಿದಂತೆ ಹಲವು ಬಗೆಯ ಸಾಲ ಸೌಲಭ್ಯಗಳನ್ನು ಷೇರುದಾರರಿಗೆ ನೀಡಿ ಲಾಭದಲ್ಲಿ ಸಾಗಿದೆ. ಕೆಲವೇ ದಶಕಗಳ ಹಿಂದೆ ಕೇವಲ ರೂ. 28 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಈ ಸಂಘಕ್ಕೆ ಬೆನ್ನೆಲುಬಾಗಿ ಸಹಕಾರಿ ಧುರೀಣ ಡಾ. ಆರ್.ಎಂ. ಮಂಜುನಾಥಗೌಡರು ನಿಂತ ಬಳಿಕ ಸಂಘವು ಸತತ ಯಶಸ್ಸು ಗಳಿಸಿದೆ. ಕುಗ್ರಾಮ ಒಂದರ ಸಹಕಾರಿ ಆಗಿದ್ದ ನನ್ನನ್ನು ಸಹ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಶಿಮೂಲ್‌ನಂಥ ಪ್ರತಿಷ್ಠಿತ ಸಂಸ್ಥೆಗೆ ಎರಡು ಬಾರಿ ಅಧ್ಯಕ್ಷನಾಗಿ ಆಯ್ಕೆ ಮಾಡಿ, ಕಾರ್ಯ ನಿರ್ವಹಿಸುವಂತೆ ಮಾಡಲು ಆರ್‌ಎಂಎಂ ಕೃಪಾಕಟಾಕ್ಷವೇ ಕಾರಣವೆಂದರು.
ಗ್ರಾಮದ ಹಿರಿಯ ದೂರದರ್ಶಿತ್ವದೊಂದಿಗೆ ಸ್ಥಾಪನೆಗೊಂಡಿದ್ದ ಈ ಸಂಘದ ಏಳಿಗೆಗೆ ತಾವು ಸದಾ ಕಟಿಬದ್ದರಾಗಿದ್ದು, ನೂತನ ಆಡಳಿತ ಮಂಡಳಿ ಸಲಹೆ ಸಹಕಾರದೊಂದಿಗೆ ಸ್ವಚ್ಛ, ಶುದ್ದ, ಪಾರದರ್ಶಕ ಆಡಳಿತ ಮುಂದೆಯೂ ನೀಡುವ ಭರವಸೆ ನೀಡಿದರು.
ಚುನಾವಣಾ ಅಧಿಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಕರಿಬಸವನಾಯ್ಕ ಚುನಾವಣೆ ಪ್ರಕ್ರಿಯೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಗ್ರಾಮಸ್ಥರಾದ ನಾಗರಕೊಡಿಗೆ ಗಣೇಶ್ ಮೂರ್ತಿ, ನಾಗರಕೊಡಿಗೆ ಬಸಪ್ಪಗೌಡ, ಸಂಘದ ಮಾಜಿ ನಿರ್ದೇಶಕ ಮೂಡಬಾಗಿಲು ರಮಾನಂದ, ಸದಾನಂದ, ನಾಗರಕೊಡಿಗೆ ಶಶಿಕುಮಾರ್, ಸಾಲಗೇರಿ ಗಣಪತಿ ಭಟ್, ತೊಗರೆ ಪ್ರಸಾದ್ ಭಟ್, ತೊಗರೆ ಹರೀಶ್‌ಗೌಡ ಮೊದಲಾದವರು ಇದ್ದರು.