ಹೊಸನಗರ : ತಾಲ್ಲೂಕಿನ ಪ್ರಥಮ ಪ್ರಜೆ ಶಾಸಕ ಬೇಳೂರು ಗೋಪಾಲಕೃಷ್ಣ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಬೇಕೆಂದು ಹೋರಾಟ ನಡೆಸುತ್ತಿದ್ದರೆ ಇತ್ತ ಹೊಸನಗರದ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರಿಯಾದ ಚರಂಡಿಯಿಲ್ಲದೆ ಮುಂಗಾರು ಮಳೆ ಆರಂಭದಲ್ಲೇ ಮನೆಯೊಳಗೆ ನೀರು ನುಗ್ಗಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ಹೊಸನಗರ ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಗಂಗನಕೊಪ್ಪ ಗ್ರಾಮದಲ್ಲಿ ಚರಂಡಿಗಳು ಮುಚ್ಚಿ ಮಳೆಯ ನೀರು ಮನೆಯೊಳಗೆ ನುಗ್ಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ನಾವು ಈಗಾಗಲೇ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಚರಂಡಿ ವ್ಯವಸ್ಥೆ ಸರಿ ಮಾಡಿ ಇಲ್ಲವಾದರೆ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿಯಾಗುತ್ತದೆ ಎಂದು ಹತ್ತಾರೂ ಬಾರಿ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗ ಮಳೆಗಾಲ ಆರಂಭವಾಗಿದೆ. ಗ್ರಾಮ ಪಂಚಾಯತಿಯ ಸುತ್ತ-ಮುತ್ತ ಎಲ್ಲಿಯೂ ಈ ಬಾರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಅದು ಅಲ್ಲದೇ ಶಿವಮೊಗ್ಗ ರಸ್ತೆಯಿಂದ ಸಾಗರ ರಸ್ತೆಗೆ ತಲುಪುವ (ಗಂಗಾಧರೇಶ್ವರ ದೇವಸ್ಥಾನದಿಂದ ಬಾಲಾಜಿ ಗ್ಯಾಸ್ ಜಗದೀಶ್‌ರವರ ಮನೆಗೆ) ರಸ್ತೆ ಅರ್ಧಂಬರ್ಧ ಸಿಮೆಂಟ್ ರಸ್ತೆ ಮಾಡಿದ್ದಾರೆ. ಸಿಮೆಂಟ್ ರಸ್ತೆಯಿಂದ ಮುಂದೆ ಸುಮಾರು 40 ಕ್ಕಿಂತಲ್ಲೂ ಹೆಚ್ಚು ಮನೆಗಳಿವೆ. ಶಾಲೆಯ ಮಕ್ಕಳು ವೃದ್ಧರು ಓಡಾಟ ನಡೆಸುವುದೇ ಕಷ್ಟಕರವಾಗಿದೆ ಎಂದು ಶಾಸಕರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಳ್ಳುತ್ತಿದ್ದಾರೆ.

ಮಳೆಗಾಲ ಪ್ರಾರಂಭ ಜನರ ಪರದಾಟ:
ಹೊಸನಗರ ಸುತ್ತ-ಮುತ್ತ ಗ್ರಾಮಗಳ ಚರಂಡಿ, ರಸ್ತೆ ಸಮಸ್ಯೆಯಾದರೇ ಇತ್ತ ಜಲಜೀವನ್ ಯೋಜನೆಯಲ್ಲಿ ಗಂಗನಕೊಪ್ಪ ಗ್ರಾಮದಲ್ಲಿ ಪೈಪ್ ಲೈನ್‌ಗಾಗಿ ಹೊಂಡ ತೆಗೆದು ಸರಿಯಾಗಿ ಮುಚ್ಚದೆ ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು ಬಿದ್ದೇಳುತ್ತಿರುವ ಘಟನೆ ನಡೆಯುತ್ತಿದೆ.
ಕಣ್ಮುಚ್ಚಿ ಕುಳಿತ ಅಧಿಕಾರಿ !
ಮಾವಿನಕೊಪ್ಪ ಸರ್ಕಲ್‌ನಿಂದ ಮುಂದೆ ಗುಲಾಬಿಯವರ ಮನೆ ಸಮೀಪ ಸುಮಾರು ಹತ್ತಾರೂ ಮನೆಗಳಿಗೆ ಕಲ್ಲಿನ ಕುಡಿಯುವ ನೀರಿನ ಬಾವಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾಗಿದೆ. ಹತ್ತಾರೂ ವರ್ಷಗಳಿಂದ ಅಲ್ಲಿನ ಗ್ರಾಮಸ್ಥರು ಉಪಯೋಗಿಸುತ್ತಾ ಬರುತ್ತಿದ್ದಾರೆ. ಆದರೆ ಆ ಬಾವಿಯ ಸುತ್ತಮುತ್ತ ಗಿಡ-ಗಂಟಿಗಳು ಹುಟ್ಟಿಕೊಂಡಿದೆ. ಬಾವಿಯ ಒಳಗಿನಿಂದ ದೊಡ್ಡ ಆಲದಮರ ಬೆಳೆದುಕೊಂಡಿದ್ದು ಅದನ್ನು ಗ್ರಾಮಸ್ಥರು ಸ್ವಚ್ಚ ಮಾಡಿಕೊಡಿ ಎಂದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧಿಕಾರಿಗಳ ಬಳಿ ಅಂಗಲಾಚಿದರೂ ಇಲ್ಲಿಯವರೆಗೆ ಸ್ವಚ್ಚ ಮಾಡಿಕೊಟ್ಟಿಲ್ಲ ಎಂದು ಗಂಗನಕೊಪ್ಪದ ಗ್ರಾಮಸ್ಥ ಗಣೇಶ್ ಆರೋಪಿಸಿದ್ದಾರೆ.
ಶಾಸಕರೇ ಅಧಿಕಾರಿಗಳೇ ಇತ್ತ ಗಮನ ಹರಿಸಿ:
ಶಾಸಕ ಬೇಳೂರು ಗೋಪಾಲಕೃಷ್ಣ ಮಳೆಗಾಲ ಪ್ರಥಮ ಹಂತದಲ್ಲಿರುವುದರಿಂದ ತಕ್ಷಣ ಅಧಿಕಾರಿಗಳಿಗೆ ಚಳಿ ಬಿಡಿಸಿ ಯಾವ-ಯಾವ ಗ್ರಾಮ ಪಂಚಾಯತಿಯಲ್ಲಿ ಸಮಸ್ಯೆಗಳಿವೆ ಎಂದು ತುರ್ತು ಸಭೆ ನಡೆಸಿ ಬಗೆಹರಿಸುವ ಪ್ರಯತ್ನ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಇದೇ ಗ್ರಾಮಸ್ಥರು ಮುಂದಿನ ದಿನದಲ್ಲಿ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬಾರದು.

