ಹೊಸನಗರ ; 2025ರ ಫೆಬ್ರವರಿ 7ರಂದು ದೂರದ ಆಗ್ರಾದಲ್ಲಿ ಭಾರತದ ವಾಯುಪಡೆಯಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ಯಾರಾಗ್ಲೈಡಿಂಗ್ ದುರ್ಘಟನೆ ಸಂಭವಿಸಿ ಸ್ಥಳದಲ್ಲೇ ವೀರಮರಣ ಹೊಂದಿದ್ದ ತಾಲೂಕಿನ ಕಸಬಾ ಹೋಬಳಿ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರಗದ್ದೆ ವಾಸಿ ವೀರ ಯೋಧ ದಿವಂಗತ ಜಿ.ಎಸ್. ಮಂಜುನಾಥ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅವರ ಸ್ವಗೃಹದಲ್ಲಿ ಶನಿವಾರ ಮೃತನ ಬಂಧು-ಬಾಂಧವರು ಸ್ಮಾರಕ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೃತ ಸೈನಾನಿಗೆ ನಮನ ಸಲ್ಲಿಸಿದರು.
ದೇಶ ಸೇವೆಗಾಗಿ ಆತ್ಮಾರ್ಪಣೆಗೈದ ವೀರಸೇನಾನಿ ಮಂಜುನಾಥ್ ಅವರ ಸವಿ ನೆನಪಿಗಾಗಿ ಕುಟುಂಬದ ಸದಸ್ಯರೆಲ್ಲಾ ಒಗ್ಗೂಡಿ 10 ಲಕ್ಷ ರೂ.ಗಳಿಗೂ ಹೆಚ್ಚು ಹಣ ವಿನಿಯೋಗಿಸಿ ಮೃತ ಯೋಧನ ಮನೆಯ ಮುಂಭಾಗದ ಆವರಣದಲ್ಲಿ ಚಿತ್ತಾಕರ್ಷಕ ಸ್ಮಾರಕ ನಿರ್ಮಿಸಿದ್ದಾರೆ. ಬಳಿಕ ಸ್ಥಳೀಯರು ಹಾಗು ಬಂಧು-ಬಳಗದವರು ಮೃತ ಯೋಧ ಮಂಜುನಾಥ್ ಅವರಿಗೆ ನುಡಿ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ಹುಸಿಯಾದ ಸಚಿವ ಮಧು ಬಂಗಾರಪ್ಪ ಅವರ ಭರವಸೆ : ಮೃತ ಯೋಧನ ಕುಟುಂಬಕ್ಕೆ ಸಿಗದ ಕವಡೆಕಾಸು !
ಈ ವೇಳೆ ಮೃತ ಯೋಧನ ಸಹೋದರ ಯುವರಾಜ್ ಮಾತನಾಡಿ, ಸೇನೆಯಲ್ಲಿ ಕರ್ತವ್ಯ ನಿರತ ವೇಳೆ ದುರಂತ ಅಂತ್ಯ ಕಂಡಾಗ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದು ಸಾಮಾನ್ಯ. ನಾವೇನು ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಮೇಲೆ ವಿಶೇಷ ಪರಿಹಾರ ನೀಡುವಂತೆ ಒತ್ತಡ ಹಾಕಿಲ್ಲ. ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಾಜಿ ಸಚಿವ ಹರತಾಳು ಹಾಲಪ್ಪ, ಈಡಿಗ ಸಮಾಜದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮೃತ ಯೋಧ ಓದಿದ್ದು ಜೇನಿ ಶಾಲಾ ಅವರಣದಲ್ಲಿ ಮೃತನ ಹೆಸರಿನಲ್ಲಿ ಹೊಸ ಶಾಲಾ ಕೊಠಡಿ ನಿರ್ಮಿಸುವ, ಜೇನಿ ಗ್ರಾಮ ಪಂಚಾಯತಿ ಆವರಣದಲ್ಲಿ ಮೃತನ ಹೆಸರಿನಲ್ಲಿ ನೂತನ ಸಭಾಂಗಣ ನಿರ್ಮಿಸುವ ಹಾಗೂ ಹೊಸನಗರ ಪಟ್ಟಣದ ಕೇಂದ್ರ ಭಾಗದಲ್ಲಿ ಮೃತ ಯೋಧನ ಪುತ್ಥಳಿ ನಿರ್ಮಾಣ ಮಾಡುವ ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ.
ಈ ತನಕ ಸರ್ಕಾರದಿಂದ ಬಿಡಿಗಾಸು ಸಿಕ್ಕಿಲ್ಲ. ಗ್ರಾಮೀಣ ಭಾಗದ ಜನರೇ ಹೆಚ್ಚಾಗಿ ಸೈನ್ಯಕ್ಕೆ ಸೇರಲು ಉತ್ಸುಕರಾದ ವೇಳೆ ಸರ್ಕಾರಗಳು ಹಾಗು ಜನಪ್ರತಿನಿಧಿಗಳು ಕರ್ತವ್ಯದ ವೇಳೆ ಮೃತರಾದ ವೀರಯೋಧರ ಕುಟುಂಬಗಳಿಗೆ ಸೂಕ್ತ ಪರಿಹಾರ, ಆರ್ಥಿಕ ನೆರವು ಹಾಗು ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಬೇಕು. ಇಂತಹ ಘಟನೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ನೈತಿಕತೆ ಮೆರೆಯಬೇಕು. ತಪ್ಪಿಸಲ್ಲಿ ಜನಪ್ರತಿನಿಧಿಗಳನ್ನು ಸಂಶಯದಿಂದ ಜನ ನೋಡುವ ಕಾಲ ದೂರವಿಲ್ಲ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





