ಚಿಕ್ಕಮಗಳೂರು ; ಕಾಫಿನಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯವಾಗಿದ್ದು, ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು KA03AD4628 ನೋಂದಣಿಯ ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಯುವಕ, ಯುವತಿಯನ್ನು ಕಾರಿನಲ್ಲೇ ಸಾಯಿಸಿ ನಂತರ ಕಾಫಿ ತೋಟವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಮಗಳೂರಿನ ಪೂರ್ಣಿಮ, ಭದ್ರಾವತಿಯ ಮಧು ಇಬ್ಬರು ಪ್ರೇಮಿಗಳಾಗಿದ್ದು, ಚಿಕ್ಕಮಗಳೂರಿನಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರಿನಲ್ಲಿ ಯುವತಿ ಪೂರ್ಣಿಮ ಶವ ಪತ್ತೆಯಾದರೆ, ಹತ್ತಿರದ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.