ಹಿಂದೂ ಧರ್ಮ ಯಾರಿಂದಲೂ ನಾಶವಾಗದು: ಶೃಂಗೇರಿ ಶ್ರೀಗಳು

0
876

ಚಿಕ್ಕಮಗಳೂರು: ಹಿಂದೂ ಧರ್ಮ ಅತ್ಯಂತ ಶ್ರೇಷ್ಠವಾದ ಮತ್ತು ಶಾಶ್ವತವಾದ ಧರ್ಮ, ಅದು ಎಂದಿಗೂ ಯಾರಿಂದಲೂ ನಾಶವಾಗದು ಎಂದು ಶೃಂಗೇರಿ ಜಗದ್ಗುರು ಶ್ರೀ ವಿದುಶೇಖರಭಾರತಿ ಸ್ವಾಮೀಜಿ ಹೇಳಿದರು.

ನಗರದ ದೋಣಿಖಣದ ಕೊಲ್ಲಾಪುರದಮ್ಮನವರ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ರಾಜಗೋಪುರಕ್ಕೆ ಶುಕ್ರವಾರ ಕುಂಭಾಬಿಷೇಕ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಹಿಂದೂ ಧರ್ಮ ಅತ್ಯಂತ ಪ್ರಾಚೀನವಾದ ಮತ್ತು ಅಳಿವಿಲ್ಲದ ಧರ್ಮ, ಎಲ್ಲರೂ ಸುಖವಾಗಿರಲಿ ಎಂದು ಹೇಳುವುದು ಹಿಂದೂ ಧರ್ಮ ಮಾತ್ರ ಎಂದು ಪ್ರತಿಪಾದಿಸಿದರು.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಧರ್ಮಕ್ಕೆ ಚ್ಯುತಿ ಬಂದಾಗ ತಾನು ಮತ್ತೆ ಮತ್ತೆ ಅವತರಿಸಿ ಧರ್ಮವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ ಹಾಗಾಗಿ ಸನಾತನವಾದ ಹಿಂದೂ ಧರ್ಮವನ್ನು ಯಾರೂ ನಾಶ ಮಾಡಲಾಗದು ಎಂದು ತಿಳಿಸಿದರು.

ಭಗವಂತ ಧರ್ಮವನ್ನು ರಕ್ಷಿಸುವುದಾಗಿ ಹೇಳಿದ್ದಾನೆಂದು ಯಾರೂ ಕೂಡ ಸುಮ್ಮನೆ ಕುಳಿತುಕೊಳ್ಳಬಾರದು, ಅಪಪ್ರಚಾರಗಳಿಗೆ ಕಿವಿಗೊಡಬಾರದು, ಎಂತಹ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಧರ್ಮವನ್ನು ಬಿಡಬಾರದು, ಪ್ರತಿಯೊಬ್ಬರೂ ಧರ್ಮಾಚರಣೆ ಮಾಡುವ ಮೂಲಕ ಧರ್ಮ ಪರಿಪಾಲನೆ ಮಾಡಬೇಕೆಂದು ಸಲಹೆ ನೀಡಿದರು.

ಭಗವಂತನ ನಾಮ, ರೂಪ ಬೇರೆ ಇರಬಹುದು ಆದರೆ ಭಗವಂತ ಒಬ್ಬನೇ ಇದ್ದಾನೆ. ಬ್ರಹ್ಮ, ವಿಷ್ಣು, ಮಹೇಶ್ವರನ ರೂಪಗಳನ್ನು ಆಯಾ ಕಾರ್ಯ ಮಾಡುವುದಕ್ಕಾಗಿ ಮತ್ತು ಲೋಕದ ರಕ್ಷಣೆಗಾಗಿ ಭಗವಂತ ಅವತರಿಸಿದ್ದಾನೆಂದು ಹೇಳಿದರು.

ನಾವು ರಾಮನವಮಿ ದಿನ ರಾಮನ ರೂಪದಲ್ಲಿರುವ, ಶಿವರಾತ್ರಿ ದಿನ ಶಿವನ ರೂಪದಲ್ಲಿರುವ, ನವರಾತ್ರಿಯಲ್ಲಿ ದೇವಿ ರೂಪದಲ್ಲಿರುವ ಆ ಭಗವಂತನನ್ನೇ ಪೂಜಿಸುತ್ತೇವೆಯೇ ಹೊರತು ಬೇರೆ ಯಾವುದನಲ್ಲಾ ಎಂದು ಸ್ಪಷ್ಟಪಡಿಸಿದರು.

ಭಗವಂತನಿಗೆ ಭಕ್ತರಲ್ಲಿ ಯಾವುದೆ ಭೇದವಿಲ್ಲ, ಬಡವ, ಬಲ್ಲಿದ, ಪಂಡಿತ, ಪಾಮರ ಎನ್ನದೇ ತನ್ನನ್ನು ಆಶ್ರಯಿಸಿದ ಎಲ್ಲರನ್ನೂ ಸಮನಾಗಿ ಕಾಣುತ್ತಾನೆ, ಭಗವಂತ ತನ್ನನ್ನು ಆಶ್ರಯಿಸಿದವರಲ್ಲಿ ಐಶ್ವರ್ಯ, ಅಧಿಕಾರ, ಅಂತಸ್ತು ಯಾವುದನ್ನೂ ನೋಡದೇ ಕೇವಲ ಭಕ್ತಿಯನ್ನು ಮಾತ್ರ ನೋಡುತ್ತಾನೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಕೆ. ರಾಮಣ್ಣ, ದೇವಾಲಯ ಅಭಿವೃದ್ದಿ ಹೊಂದಿದ ಬಗೆಯನ್ನು ವಿವರಿಸಿದರು. ಸಮಾರಂಭಕ್ಕೆ ಮೊದಲು ಶ್ರೀಗಳನ್ನು ದೇವಾಲಯ ಸಮಿತಿ ವತಿಯಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಪಾದಪೂಜೆ ನೆರವೇರಿಸಿ ಭಿನ್ನವತ್ತಳೆ ಸಮರ್ಪಿಸಲಾಯಿತು.

ಕೊಲ್ಲಾಪುರದಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು, ಸಹಸ್ರಾರು ಭಕ್ತರ ಹರ್ಷೊದ್ಗಾರಗಳ ನಡುವೆ ನೂತನ ರಾಜಗೋಪುರಕ್ಕೆ ಕುಂಭಾಭಿಷೇಕ ನೆರವೇರಿಸಿದರು. ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ. ಆರ್. ಗೌರಿಶಂಕರ್, ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here