ದುಬಾರ್‌ತಟ್ಟಿ ಶಾಲೆಗೆ ತಾತ್ಕಾಲಿಕ ಶಿಕ್ಷಕರ ನಿಯೋಜಿಸಿ ಬಿಇಒ ಆದೇಶ

0 97

ಹೊಸನಗರ : ನಗರ ಹೋಬಳಿ ದುಬಾರ್‌ತಟ್ಟಿ ಶಾಲೆಗೆ ತಾತ್ಕಾಲಿಕ ಶಿಕ್ಷಕರನ್ನು ನಿಯೋಜಿಸಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ಆದೇಶಿಸಿದ್ದಾರೆ.

16 ಕಿ.ಮೀ ಪಾದಯಾತ್ರೆ ಮೂಲಕ ದುಬಾರ್‌ತಟ್ಟಿ ಶಾಲೆಯ 14 ಮಕ್ಕಳು ಹಾಗೂ ಪೋಷಕರು ಎಸ್.ಡಿ.ಎಂ.ಸಿ ಸದಸ್ಯರು ಗ್ರಾಮಸ್ಥರು ಎಲ್ಲರೂ ಸೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಕುಳಿತು ಖಾಯಂ ಶಿಕ್ಷಕರು ಬೇಕೇಬೇಕೆಂದು ಇಂದು ಧರಣಿ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಶಿಕ್ಷಕರ ನಿಯೋಜಿಸಿ ಆದೇಶ ನೀಡಿರುವ‌ ಅವರು, ಆ ಶಾಲೆಯಲ್ಲಿ ಎರಡು ಶಿಕ್ಷಕರ ಹುದ್ದೆಗಳಿದ್ದು, ಒಂದು ಹುದ್ದೆಯಲ್ಲಿ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಂದು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹ ಶಿಕ್ಷಕರು ಸೆ.06 ರಂದು ವರ್ಗಾವಣೆ ಹೊಂದಿರುವುದರಿಂದ ಆ ಹುದ್ದೆಯು ಖಾಲಿಯಾಗಿದೆ. ಆ ಹುದ್ದೆಗೆ ಇನ್ನೊಬ್ಬ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ತಿಳಿಸಲಾಗಿದೆ. ಆದರೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಎಸ್.ಡಿಎಂ.ಸಿ ಯವರು, ಪೋಷಕರು ಒಪ್ಪುತ್ತಿಲ್ಲ, ಬದಲಾಗಿ ಖಾಯಂ ಶಿಕ್ಷಕರನ್ನೇ ಕೊಡಬೇಕೆಂದು ಪಟ್ಟುಹಿಡಿದಿದ್ದಾರೆ. ಅಲ್ಲಿಗೆ ವರ್ಗಾವಣೆಯಲ್ಲಿ ಶಿಕ್ಷಕರು ಆ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಖಾಯಂ ಶಿಕ್ಷಕರನ್ನು ಇಲಾಖೆಯಿಂದ ನೀಡಲು ಅವಕಾಶವಿಲ್ಲ.

ಇಲ್ಲಿಗೆ ಬೇರೆ ಶಾಲೆಗಳಿಂದ ನಿಯೋಜನೆ ಮಾಡಲು ಹತ್ತಿರದ ಶಾಲೆಗಳಾದ ಸರ್ಕಾರಿ ಗಂಡು ಮಕ್ಕಳ ಶಾಲೆ ನಗರ ಇಲ್ಲಿ ಇಬ್ಬರು ಖಾಯಂ ಶಿಕ್ಷಕರಿದ್ದಾರೆ ಹಾಗೆಯೇ ಪಕ್ಕದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯೂ ಸಹ ಇಬ್ಬರು ಶಿಕ್ಷಕರ ಕಾರ್ಯನಿರ್ವಹಿಸುತ್ತಿದ್ದು ಉಳಿದ ಮೂರು ಹುದ್ದೆಗಳಲ್ಲಿ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯೂ ಸಹ ಶಿಕ್ಷಕರ ಕೊರತೆ ಇದೆ. ಇನ್ನೊಂದು ಪಕ್ಕದ ಶಾಲೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಸೆ ಇಲ್ಲೂ ಸಹ ಮೂರು ಖಾಯಂ ಶಿಕ್ಷಕರ ಹುದ್ದೆ ಇದ್ದು ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ಶಿಕ್ಷಕರನ್ನು ಶೂನ್ಯ ಶಿಕ್ಷಕರ ಶಾಲೆಯಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಂಡೆಗದ್ದೆ ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಸುತ್ತಮುತ್ತಲಿನ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಗಂಡು ಮಕ್ಕಳ ಶಾಲೆಯ ಸಹ ಶಿಕ್ಷಕಿ ಶಾಂತ ಬಿ ಎಸ್ ರವರನ್ನು ಆಡಳಿತಾತ್ಮಕ ಚಾರ್ಜ್ ವಹಿಸಿಕೊಳ್ಳಲು ತಾತ್ಕಾಲಿಕವಾಗಿ ದುಬಾರತಟ್ಟಿ ಇಲ್ಲಿಗೆ ನಿಯೋಜಿಸಿ ಆದೇಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!