ಹೊಸನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ | ಶಿವಮೊಗ್ಗದಲ್ಲಿ ಗೀತಾ ಗೆಲುವು ನಿಶ್ಚಿತ ; ಮಾಜಿ ಸಚಿವ ಕಿಮ್ಮನೆ ರತ್ನಾಕರ್

0 727

ಹೊಸನಗರ : ಬಿಜೆಪಿಯು ಅನೈತಿಕ ರೀತಿಯಲ್ಲಿ ಚುನಾವಣೆ ನಡೆಸಲು ಮುಂದಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಇಲ್ಲಿನ ಈಡಿಗರ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ನಿರಂಕುಶ ಪ್ರಭುತ್ವದಂತೆ ಭಾಸವಾಗುತ್ತಿದೆ. ಪ್ರಧಾನಮಂತ್ರಿ ಮಾಧ್ಯಮಗಳ ಎದುರು ಬರುತ್ತಿಲ್ಲ. ವಿರೋಧ ಪಕ್ಷಗಳನ್ನು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಮಟ್ಟ ಹಾಕಲು ಹೊರಟಿದ್ದಾರೆ. ಅವರ ಕಾರ್ಯವೈಖರಿಯನ್ನು ಯಾರೊಬ್ಬರೂ ಪ್ರಶ್ನಿಸಬಾರದು ಎಂಬ ಧೋರಣೆ ಎಷ್ಟರ ಮಟ್ಟಿಗೆ ಸರಿ. ದೇಶದ ಜನರು ಈ ಬಾರಿ ಎಚ್ಚರ ತಪ್ಪಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಲ್ಲಿ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕು. ಆರ್‌ಎಸ್‌ಎಸ್ ಸಿದ್ದಾಂತಗಳನ್ನು ದೇಶದಲ್ಲಿ ಬಿತ್ತುವ ಕಾರ್ಯ ನಡೆಸುತ್ತಿದೆ ಎಂದು ಆಪಾದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಂಗಾರಪ್ಪ ಅವರ ಕೊಡುಗೆಗಳು ಅನನ್ಯ. ಅವರ ಯೋಜನೆಗಳು ಜನಪ್ರಿಯವಾಗಿವೆ. ಇದನ್ನು ಜನತೆ ಗಮನಿಸಿ ಈ ಬಾರಿಯ ಚುನಾವಣೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ, ಆಯನೂರು ಮಂಜುನಾಥ್ ಮಾತನಾಡಿ, ಪಾಂಡವರು ವನವಾಸ ಅನುಭವಿಸಿ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದರು. ಈಗಲೂ ಇದೇ ಸನ್ನಿವೇಶ ರಾಜಕೀಯ ಕುರುಕ್ಷೇತ್ರದಲ್ಲಿ ಎದುರಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೀತಾ ಶಿವರಾಜ್‌ಕುಮಾರ್, ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ದೊರೆತಲ್ಲಿ, ಜನಸೇವೆ ಮಾಡುವ ಹಂಬಲವಿದೆ. ತಂದೆಯವರ ಕಾರ್ಯವೈಖರಿ ಕುರಿತು ಹೆಮ್ಮೆ ಇದೆ ಎಂದರು.

ಇದೇ ವೇಳೆ ಬ್ಲಾಕ್‌ ಕಾಂಗ್ರೆಸ್ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಜಿ.ಚಂದ್ರಮೌಳಿ ಅವರ ಪದಗ್ರಹಣ ನೆರವೇರಿತು.

ಚಿತ್ರ ನಟ ಶಿವರಾಜ್‌ಕುಮಾರ್, ಎಂಎಡಿಬಿ ಅಧ್ಯಕ್ಷ ಮಂಜುನಾಥಗೌಡ, ಶಾಸಕ ಬೇಳೂರು ಗೋಪಾಲಕೃಷ್ಣ, ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಿ.ಜಿ.ನಾಗರಾಜ್, ಇನ್ನೂ ಮುಂತಾದವರು ಮಾತನಾಡಿದರು.

ಎಂ.ಪಿ ಸುರೇಶ, ಗುರುರಾಜ್ ಕೆ.ಎಸ್, ಸದಾಶಿವ ಶ್ರೇಷ್ಠಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತನಾಡಿದರು.

Leave A Reply

Your email address will not be published.

error: Content is protected !!