ಹೊಸನಗರ ; ಜಲಪಾತಗಳ ವೀಕ್ಷಣೆಗೆ ಪ್ರವೇಶ ನಿರ್ಬಂಧ

0 57

ಹೊಸನಗರ: ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಲ್ಲಿನ ಬಹುತೇಕ ಜಲಪಾತಗಳು ಮಿತಿಮೀರಿದ ರಭಸದಿಂದ ಉಕ್ಕಿ ಹರಿಯುತ್ತಲಿದ್ದು ಅಭಯಾರಣ್ಯ ವ್ಯಾಪ್ತಿಯ ಇಂತಹ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ತಾಲೂಕಿನ ನಗರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಹಿಡ್ಲುಮನೆ ಜಲಪಾತ ಮತ್ತು ಯಡೂರು ಸಮೀಪದ ತಲಾಸಿ ಅಬ್ಬಿ ಫಾಲ್ಸ್‌ಗೆ ಕಳೆದ ಹದಿನೈದು ದಿನಗಳಿಂದ ಬೆಂಗಳೂರು ಸಹಿತ ರಾಜ್ಯದ ಬೇರೆ ಬೇರೆ ಕಡೆಗಳಿಂದ ವೀಕ್‌ ಎಂಡ್ ಟ್ರಿಪ್ ಗಾಗಿ ಪ್ರವಾಸಿಗರು ಬರುತ್ತಲೇ ಇದ್ದಾರೆ. ಹೀಗೆ ಬರುವ ಪ್ರವಾಸಿಗರು ಜಲಪಾತಕ್ಕಿರುವ ಮುಖ್ಯರಸ್ತೆಯಿಂದ ಎರಡರಿಂದ ನಾಲ್ಕು ಕಿ.ಮೀ ವರೆಗೂ ದಟ್ಟ ಅರಣ್ಯದ ನಡುವೆ ನಡೆದುಕೊಂಡೇ ತೆರಳಬೇಕಾಗುತ್ತದೆ. ಮಳೆ ನೀರಿನ ಭೋರ್ಗರೆತ ಹಾಗೂ ಮಂಜು ಮುಸುಕುವ ಮೋಡಗಳ ಸೌಂದರ್ಯ ವೀಕ್ಷಿಸುವ ಮಧ್ಯೆ ಹಲವು ಪ್ರವಾಸಿಗರು ಜಲಪಾತದ ತುದಿಯವರೆಗೂ ಹೋಗುವುದು, ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುವುದು, ಸೆಲ್ವಿ ಹಾಗೂ ರೀಲ್ಸ್ ಮಾಡುವ ಭರದಲ್ಲಿ ಕಾಲುಜಾರಿ ಪ್ರಪಾತಕ್ಕೆ ಬಿದ್ದು ಹಲವು ಜೀವಗಳು ಬಲಿಯಾಗುತ್ತಲಿವೆ. ಕೆಲ ಪ್ರವಾಸಿಗರ ಮೋಜು ಮಸ್ತಿಯು ಸ್ಥಳೀಯರಿಗೂ ತೊಂದರೆಯಾಗುತ್ತಲಿದ್ದು ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಗೂ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಠಾಣಾಧಿಕಾರಿ ನಾಗರಾಜ್‌, ನಗರ ಠಾಣೆಯ ವ್ಯಾಪ್ತಿ ಮತ್ತು ಅಭಯಾರಣ್ಯದ ವ್ಯಾಪ್ತಿಯ ಕೊಡಚಾದ್ರಿ, ಹಿಡ್ಲುಮನೆ ಫಾಲ್ಸ್ ಹಾಗೂ ಯಡೂರು ತಲಾಸಿ ಅಬ್ಬಿ ಫಾಲ್ಸ್ ಗಳ ವೀಕ್ಷಣೆಗೆ ಪ್ರವಾಸಿಗರ ಜೀವದ ಸುರಕ್ಷತೆಯ ದೃಷ್ಠಿಯಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದರು.

ಕುದುರೆಮುಖ ವನ್ಯಜೀವಿ ವಿಭಾಗದ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಆರಿಸಿನ ಗುಂಡಿ ಫಾಲ್ಸ್, ಹಿಡ್ಲುಮನೆ ಫಾಲ್ಸ್, ಕೋಸಳ್ಳಿ ಫಾಲ್ಸ್ ಮತ್ತು ಬೆಳಕಲು ತೀರ್ಥ ಫಾಲ್ಸ್ ಗಳಿಗೆ ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ಆದೇಶದಂತೆ ಜು.25 ರಿಂದ ಪ್ರವಾಸಿಗರ ಸುರಕ್ಷತೆಗಾಗಿ ಕಡ್ಡಾಯವಾಗಿ ಪ್ರವೇಶ ನಿಷೇಧಿಸಲಾಗಿದೆ.

ಹಾಗೆಯೇ ಈ ಕುರಿತು ಪ್ಲೆಕ್ಸ್ ಮತ್ತು ಬೋರ್ಡ್‌ಗಳನ್ನು ಕೂಡ ಅಳವಡಿಸಲಾಗಿದೆ. ಹಾಗಾಗಿ ಪ್ರವಾಸಿಗರು ಇಲಾಖೆಯ ಮುಂದಿನ ಆದೇಶ ಬರುವವರೆಗೂ ಸಹಕರಿಸಬೇಕೆಂದು ಮೂಕಾಂಬಿಕಾ ಅಭಯಾರಣ್ಯ ವಯಯದ ಅರಣ್ಯಾಧಿಕಾರಿ ಎ.ದೀಪಕ್ ನಾಯ್ಕ ತಿಳಿಸಿರುತ್ತಾರೆ.

Leave A Reply

Your email address will not be published.

error: Content is protected !!