ತಳ ಹಂತದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ವಿಶೇಷ ತಂಡ ರಚನೆ ; ಕಲಗೋಡು ರತ್ನಾಕರ್

0 52


ಹೊಸನಗರ: ತಾಲೂಕಿನ 30 ಗ್ರಾಮ ಪಂಚಾಯಿತಿಗಳ ಪೈಕಿ 23 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಡಿ ಸದಸ್ಯ ಕಲಗೋಡು ರತ್ನಾಕರ ಹೇಳಿದರು.


ಅವರು ಮಾರುತಿಪುರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದು, ಈ ಹಿಂದಿಗಿಂತಲೂ ಹೆಚ್ಚು ಕಡೆಗಳಲ್ಲಿ ಅಧಿಕಾರ ಪಡೆದುಕೊಂಡಿದೆ. ಇದು ಜನತೆ ಬಿಜೆಪಿಯಿಂದ ಬೇಸತ್ತು ಕಾಂಗ್ರೆಸ್ ಅನ್ನು ನೆಚ್ಚಿಕೊಂಡಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಿದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ‍್ಯವನ್ನು ಕಾರ‍್ಯಕರ್ತರು ಮಾಡುತ್ತಿದ್ದಾರೆ. ಉತ್ತಮ ಆಡಳಿತ ರಾಜ್ಯದ ಜನತೆಯ ಪಾಲಿಗೆ ಸಿಗಲಿದೆ. ತಳ ಹಂತದಲ್ಲಿ ಪಕ್ಷ ಗೆಲುವು ಸಾಧಿಸುತ್ತಿರುವುದು ಪಕ್ಷ ಸಂಘಟನೆಗೆ ಸಹಕಾರಿಯಾಗಿದೆ ಎಂದರು.


ಈ ಹಿಂದಿನ 5 ವರ್ಷದ ಬಿಜೆಪಿ ಆಡಳಿತದಲ್ಲಿ ಹೊಸನಗರ ತಾಲೂಕಿನಲ್ಲಿ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿತ್ತು. ಪಟ್ಟಣದಲ್ಲಿ 110 ಕೆ.ವಿ ವಿದ್ಯುತ್ ಸ್ಥಾವರ, ಹರಿದ್ರಾವತಿಯಲ್ಲಿ 33 ಕೆವಿ ವಿದ್ಯುತ್ ಸ್ಥಾವರ, ರಿಪ್ಪನ್‌ಪೇಟೆ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇದರಿಂದ ಜನತೆ ಸಂಕಷ್ಟ ಪಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಕಾರ‍್ಯ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.


ಮುಂಬರುವ ಚುನಾವಣೆಗೆ ಪಕ್ಷವನ್ನು ಬಲಪಡಿಸಲು ಪ್ರತ್ಯೇಕ ಕಾರ‍್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಪಕ್ಷ ಸಂಘಟನೆಗಾಗಿಯೇ ವಿಶೇಷ ತಂಡ ರಚಿಸಲಾಗಿದೆ. ಲೋಕಸಭಾ ಚುನಾವಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.


ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಕಾರ‍್ಯ ಮುಕ್ತಾಯಗೊಂಡಿಲ್ಲ. ಕರಾವಳಿ ಜಿಲ್ಲೆಯ ಮಾದರಿಯಲ್ಲಿ ಹೊಸನಗರ, ಸಾಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕುಗಳಿಗೂ ಹೆಚ್ಚಿನ ಜಿಲ್ಲಾ ಪಂಚಾಯಿತಿ ಸ್ಥಾನ ರಚನೆಗೆ ಮನವಿ ನೀಡಲಾಗಿದೆ ಎಂದರು.


ಈ ವೇಳೆ ಪಕ್ಷದ ತಾಲೂಕು ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಜಿ.ಚಂದ್ರಮೌಳಿ, ಎರಗಿ ಉಮೇಶ್, ಗ್ರಾಪಂ ಅಧ್ಯಕ್ಷೆ ದೀಪಿಕಾ, ಉಪಾಧ್ಯಕ್ಷೆ ಶಂಕರಶೆಟ್ಟಿ, ಸದಸ್ಯ ಚಿದಂಬರ್ ಎಚ್.ಬಿ. ಪ್ರಕಾಶ್, ಅವಿನಾಶ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!