ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ನಿಜವಾದ ರೈತರು ನಾವೇ

0 39

ಶಿವಮೊಗ್ಗ: ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ನಿಜವಾದ ರೈತರು ನಾವೇ ಎಂದು ಸೋಗಾನೆ ಭೂ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಗಾನೆ ವಿಮಾನ ನಿಲ್ದಾಣದ ಮೊದಲ ವಿಮಾನ ಸ್ವಾಗತದ ಕಾರ್ಯಕ್ರಮದಲ್ಲಿ ರೈತರನ್ನು ಸನ್ಮಾನಿಸಿದ್ದನ್ನು ಕೆಲವರು ವಿರೋಧಿಸಿದ್ದಾರೆ. ಅವರು ನಿಜವಾದ ರೈತರೇ ಅಲ್ಲ ಎಂದು ಅವಮಾನಿಸಿದ್ದಾರೆ. ಆದರೆ ಭೂಮಿ ಕಳೆದುಕೊಂಡ ರೈತರು ಎನ್ನುವುದಕ್ಕೆ ನಮ್ಮಲ್ಲಿ ದಾಖಲೆ ಇದೆ. ಪಹಣಿ ಇದೆ. ಆದರೂ ಕೂಡ ಕೆಲವರು ನಮ್ಮ ವಿರುದ್ಧ ಪ್ರತಿಭಟನೆ ಮಾಡಿ ನಮ್ಮನ್ನು ರೈತರೇ ಅಲ್ಲ ಎಂದಿರುವುದು ನಮಗೆ ತೀವ್ರ ಅವಮಾನವಾಗಿದೆ. ಇವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಕೇಸು ದಾಖಲಿಸಿಕೊಳ್ಳಬೇಕು ಮತ್ತು ಗಡಿಪಾರು ಮಾಡಬೇಕು ಎಂದರು.


ಸೋಗಾನೆ ಭೂಹಕ್ಕು ಹೋರಾಟ ಸಮಿತಿ ಕಳೆದ 16 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ರೈತರಿಗೆ ನ್ಯಾಯ ಒದಗಿಸಿದೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಈಗಿನ ಸರ್ಕಾರ ಎಲ್ಲರೂ ನಮಗೆ ಸಹಾಯ ಮಾಡಿದ್ದಾರೆ. ಆದರೆ ನಮ್ಮ ಬೇಡಿಕೆಗಳು ಇನ್ನೂ ಬೇಕಾದಷ್ಟಿವೆ. ಮುಖ್ಯವಾಗಿ ಭೂಮಿ ಕಳೆದುಕೊಂಡವರಿಗೆ ನಿವೇಶನ ಸಿಗಬೇಕಾಗಿದೆ. ಆ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.


ಸುಮಾರು 450 ನಿವೇಶನಗಳನ್ನು ಮಂಜೂರು ಮಾಡಬೇಕಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಬಳಿ ಹಣವೂ ಇದೆ. ಆದರೆ ಇದು ನ್ಯಾಯಾಲಯದಲ್ಲಿ ಇದೆ. ಬರುವ ಸೆ.29ಕ್ಕೆ ಅಂತಿಮ ತೀರ್ಪು ಹೊರಬರುತ್ತದೆ. ಈಗಾಗಲೇ ಕೋರ್ಟ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. ಕೆಹಚ್‌ಬಿಗೆ ಕಟ್ಟಬೇಕಾದ ºಣವನ್ನು ಕಟ್ಟಲು ಹೇಳಿದೆ ಎಂದರು.
ವಿಮಾನ ಸ್ವಾಗತದ ಕಾರ್ಯಕ್ರಮದಲ್ಲಿ ಇಬ್ಬರು ರೈತರನ್ನು ಸನ್ಮಾನಿಸಲಾಯಿತು. ಆದರೆಅವರು ನಿಜವಾದ ರೈತರಲ್ಲ. ಬಿಜೆಪಿ ಕಾರ್ಯಕರ್ತರು ಎಂದು ಕೆಲವರು ಆರೋಪಿಸಿದರು. ಅದು ಶುದ್ಧ ಸುಳ್ಳು. ನಾವು ಬಿಜೆಪಿ ಕಾರ್ಯಕರ್ತರಲ್ಲ. ಯಾವ ಪಕ್ಷದವರೂ ಅಲ್ಲ. ಹೋರಾಟವೇ ನಮ್ಮ ಗುರಿ. ನಾವೇನೂ ಸನ್ಮಾನ ಮಾಡಿ ಎಂದು ಕೇಳಿರಲಿಲ್ಲ.400 ರೈತರ ಪರವಾಗಿ ಇಬ್ಬರಿಗೆ ಸನ್ಮಾನ ಮಾಡಿದ್ದಾರೆ. ಅದು ಔಪಚಾರಿಕ ಮಾತ್ರ. ಅದನ್ನೇ ದೊಡ್ಡ ವಿಷಯವನ್ನಾಗಿಟ್ಟುಕೊಂಡು ರೈತರಲ್ಲದವರು ನಿಜವಾದ ರೈತರನ್ನು ಅವಮಾನ ಮಾಡಿದ್ದಾರೆ ಎಂದು ದೂರಿದರು.


ನಾವೇ ನಿಜವಾದ ರೈತರು ಎನ್ನುವುದಕ್ಕೆ ನಮ್ಮ ಬಳಿ ಬೇಕಾದಷ್ಟು ಆಧಾರಗಳಿವೆ. ಹೋರಾಟ ಸಮಿತಿ ದೊಡ್ಡದಿದೆ. ಸುಮಾರು 400 ರೈತರು ಭೂಮಿ ಕಳೆದುಕೊಂಡಿದ್ದಾರೆ. ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಾವು ಯಾರ ಪರವಾಗಿಯೂ ಇಲ್ಲ, ಏಜೆಂಟರೂ ಅಲ್ಲ. ಗೋವಿಂದರಾಜ್ ಎಂಬುವರ ತಂದೆ ಜಮೀನು ಮಾರಾಟ ಮಾಡಿದ್ದು ನಿಜ. ಆದರೆ ಇನ್ನೂ 2.5 ಎಕರೆ ಜಮೀನಿತ್ತು. ಆ ಜಮೀನಿಗೆ ಪರಿಹಾರ ಸಿಕ್ಕಿದೆ. ಅವರ ತಂದೆ ಈಗಿಲ್ಲ. ಅವರ ಪರವಾಗಿ ಗೋವಿಂದರಾಜ್ ಅವರನ್ನು ಸನ್ಮಾನಿಸಲಾಗಿದೆಯಷ್ಟೆ ಎಂದು ಸ್ಪಷ್ಟನೆ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಭೂಹಕ್ಕು ಹೋರಾಟ ಸಮಿತಿಯ ಗೌರವಾಧ್ಯಕ್ಷ ಮುರುಗೇಶ ಗೌಡ್ರು, ಪ್ರಮುಖರಾದ ಮಹದೇವ್, ಶಿವಾನಂದ್, ವೆಂಕಟೇಶ್, ರಾಮಣ್ಣ, ಗೋವಿಂದರಾಜ್ ಸೇರಿದಂತೆ ಹಲವರಿದ್ದರು

Leave A Reply

Your email address will not be published.

error: Content is protected !!