ಕೊಡಚಾದ್ರಿ ಪ್ರವೇಶಕ್ಕೆ ನಿರ್ಬಂಧ ; ಗಿರಿ ನಂಬಿ ಬದುಕು ಕಟ್ಟಿಕೊಂಡವರ ಸ್ಥಿತಿ ಅಯೋಮಯ

1 45

ಹೊಸನಗರ: ಕೊಡಚಾದ್ರಿ ಮತ್ತು ಹಿಡ್ಲುಮನೆ ಫಾಲ್ಸ್ ಗೆ ಪ್ರವಾಸಿಗರು, ಭಕ್ತರು ಹಾಗೂ ಜೀಪ್ ಪ್ರವೇಶಕ್ಕೆ ವನ್ಯಜೀವಿ ವಿಭಾಗ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟ ಕೊಲ್ಲೂರು ಮೂಕಾಂಬಿಕೆಯ ಮೂಲ ಸ್ಥಳ. ಹಾಗಾಗಿ ಕೇರಳದಿಂದ ದಿನನಿತ್ಯ ಸಾಕಷ್ಟು ಜನ ಭಕ್ತರು ಆಗಮಿಸುತ್ತಾರೆ. ಸದ್ಯ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೊಡಚಾದ್ರಿಗೆ ಸಂಚರಿಸುವ ರಸ್ತೆ ಯೋಗ್ಯವಾಗಿಲ್ಲ ಎನ್ನುವ ಕಾರಣ ನೀಡಿ ನಿರ್ಬಂಧ ಹೇರಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜೀಪು ಮಾಲೀಕರು ಹಾಗೂ ಪ್ರವಾಸಿಗರು ಇಷ್ಟು ವರ್ಷಗಳಿಂದಲೂ ರಸ್ತೆ ಇರೋದು ಹೀಗೆ. ಆಗ ಅರಣ್ಯ ಇಲಾಖೆ ಎಲ್ಲಿ ಹೋಗಿತ್ತು ? ಎಂದು ಪ್ರಶ್ನಿಸಿದ್ದಾರೆ. ಇದೇ ರಸ್ತೆಯಲ್ಲಿ ವರ್ಷಾನುಗಟ್ಟಲೇ ನಾವು ಜೀಪು ಓಡಿಸಿದ್ದೇವೆ. ಪ್ರವಾಸಿಗರು ಕೂಡ ಬಂದಿದ್ದಾರೆ. ಆದರೆ ಅವರಿಗೆ ಆಗ ಸಮಸ್ಯೆ ಇದೆ ಎನ್ನುವುದು ಗೊತ್ತಾಗಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮವನ್ನೆ ನಂಬಿಕೊಂಡಿವೆ ನೂರಾರು ಕುಟುಂಬಗಳು

ಕೊಡಚಾದ್ರಿಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿದೆ. ಕೊಲ್ಲೂರು, ನಿಟ್ಟೂರು, ಕಟ್ಟಿನಹೊಳೆ, ಸಂಪೆಕಟ್ಟೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಜೀಪುಗಳಿವೆ. ಅರಣ್ಯ ಇಲಾಖೆಯ ಈ ಕ್ರಮದಿಂದ ಅವರ ಸಂಸಾರ ನಿರ್ವಹಣೆ ಕೂಡ ಕಷ್ಟವಾಗಲಿದೆ. ಈ ರೀತಿಯ ಕ್ರಮಗಳು ಮಲೆನಾಡಿನ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ಜೀಪನ್ನೇ ನಂಬಿ ಜೀವನ ನಡೆಸುತ್ತಿರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷ ಅರಣ್ಯ ಇಲಾಖೆಗೆ ಯಾವುದೇ ತೊಂದರೆಯಿರಲಿಲ್ಲ. ಈಗ ತಕ್ಷಣ ನಿದ್ದೆಯಿಂದ ಅರಣ್ಯ ಇಲಾಖೆ ಎದ್ದು ನಿದ್ರೆ ಕಣ್ಣಿನಲ್ಲಿ ಆದೇಶ ಹೊರಡಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/m8hrkRaImI/?mibextid=ZbWKwL

ಕೊಲ್ಲೂರು ಮೂಕಾಂಬಿಕೆಯ ಮೂಲ ಕ್ಷೇತ್ರ ಈ ಕೊಡಚಾದ್ರಿ

ಕೊಡಚಾದ್ರಿ ಕೊಲ್ಲೂರು ಮೂಕಾಂಬಿಕೆಯ ಮೂಲ ಕ್ಷೇತ್ರ ಕೂಡ ಹೌದು. ಕೇರಳ ಭಾಗದಿಂದ ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಾರೆ. ಶಂಕರಾಚಾರ್ಯರು ತಪಸ್ಸು ಮಾಡಿದ ಸರ್ವಜ್ಞ ಪೀಠಕ್ಕೆ ಬಂದು ಪೂಜೆ ಸಲ್ಲಿಸಿ ತೆರಳುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅರಣ್ಯ ಇಲಾಖೆಯ ಈ ಕ್ರಮದಿಂದ ಸಾಕಷ್ಟು ತೊಂದರೆಯಾಗಿದೆ. ಕೊಡಚಾದ್ರಿ ಕೇವಲ ಪ್ರವಾಸಿ ತಾಣವಲ್ಲ, ಬದಲಿಗೆ ಪುಣ್ಯ ಕ್ಷೇತ್ರ ಕೂಡ. ವನ್ಯಜೀವಿ ವಿಭಾಗ ಈ ಆದೇಶವನ್ನ ಕೂಡಲೇ ವಾಪಸ್ಸು ಪಡೆಯಬೇಕೆಂದು ಕೊಡಚಾದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವರಾಮ್ ಶೆಟ್ಟಿ ಆಗ್ರಹಿಸಿದ್ದಾರೆ.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಈ ವನ್ಯಜೀವಿ ವಿಭಾಗದ ಆದೇಶ

ಅರಿಶಿನ ಗುಂಡಿ ಫಾಲ್ಸ್ ನೋಡಲು ಹೋಗಿದ್ದ ವೇಳೆ ಶರತ್ ಎನ್ನುವ ಯುವಕ ಕಾಲು ಜಾರಿಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದ. ಅರಿಶಿನಿ ಗುಂಡಿ ಫಾಲ್ಸ್ ಮೂಕಾಂಬಿಕಾ ಅಭಯಾರಣ್ಯದ ವ್ಯಾಪ್ತಿಗೆ ಬರುತ್ತೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಫಾಲ್ಸ್​​ಗೆ ಹೋಗಿದ್ದ ಶರತ್ ಹಾಗೂ ಅತನ ಸ್ನೇಹಿತರು ಹೋಗಿದ್ದರು. ಅದು ಕೂಡ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಪ್ರದೇಶ ಅಲ್ಲಿಗೆ ಹೋಗುವ ಮುನ್ನ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಂತೆ. ಆದರೆ ಇವರು ಅನುಮತಿ ಪಡೆಯದೇ ಅಲ್ಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವ ರೀತಿ ಅಭಯಾರಣ್ಯದ ಪ್ರದೇಶವನ್ನ ಕಾವಲು ಕಾಯುತ್ತಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ. ತಮ್ಮ ನಿರ್ಲಕ್ಷ್ಯವನ್ನ ಮುಚ್ಚಿಕೊಳ್ಳಲು ಈ ರೀತಿ ನಿರ್ಬಂಧಕ್ಕೆ ಇಲಾಖೆ ಮುಂದಾಗಿದೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಒಟ್ಟಾರೆ ವನ್ಯಜೀವಿ ವಿಭಾಗದ ಈ ಕ್ರಮ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರು ಎನ್ನುವಂತಾಗಿರೋದು ಮಾತ್ರ ಸತ್ಯ.

ವರದಿ: ಪ್ರಜ್ವಲ್ ನಿಟ್ಟೂರು.

1 Comment
  1. VN HEMANTHAKUMARA says

    ಕೊಡಚಾದ್ರಿ ಗಿರಿ ಪ್ರವೇಶ ಕೊಟ್ಟಿದ್ದಿದ್ದರೆ ಉತ್ತರಾಖಂಡದಲ್ಲಿ ಶ್ರೀ ಶಂಕರಾಚಾರ್ಯರಪೀಠವು ಜೋಶಿಮಠವು ಕುಸಿದಂತೆ ಇನ್ನೊಂದು ಜೋಶಿಮಠ ಶ್ರೀ ಶಂಕರಾಚಾರ್ಯರ ತಪೋ ಗಿರಿ ಕೊಡಚಾದ್ರಿ ಗಿರಿ ಕುಸಿದಂತಾಗುತ್ತಿತ್ತು ….ಇದರಿಂದಾಗಿ ನದಿಗಳ ಜನ್ಮಭೂಮಿ ಸಹ್ಯಾದ್ರಿ ಗಿರಿಯಲ್ಲಿ ಬತ್ತಿಹೋಗುತ್ತಿತ್ತು…ಕೊಡಚಾದ್ರಿ ‌ಪ್ರವೇಶ ನಿರ್ಬಂಧ ಸರಿಯಾಗಿದೆ…

Leave A Reply

Your email address will not be published.

error: Content is protected !!