ಶಿವಮೊಗ್ಗ :ಜುಲೈ 2 ರಂದು ನಂದಿಬೆಟ್ಟದಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ₹307.80 ಕೋಟಿ ಮೊತ್ತದ ಕುಡಿಯುವ ನೀರು ಸೇರಿದಂತೆ ಇತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ನಿವಾರಣೆಗೆ ದೀರ್ಘಕಾಲಿಕ ಪರಿಹಾರ ಒದಗಿಸಲಿವೆ ಎಂದು ಹೇಳಿದರು.
ಅನುಮೋದನೆ ಪಡೆದ ಪ್ರಮುಖ ಯೋಜನೆಗಳು:
- ದಂಡಾವತಿ ಡ್ಯಾಂ ಮಾರ್ಪಡಿತ ಯೋಜನೆ (ಸೊರಬ ತಾಲ್ಲೂಕು):
ರೈತರ ಜಮೀನು ಅಥವಾ ಮನೆಗಳು ಮುಳುಗಡೆಗೊಳ್ಳದಂತೆ ವಿನ್ಯಾಸಗೊಳಿಸಲಾಗಿದ್ದು, ಪರಿಸರ ಸ್ನೇಹಿ ಹಾಗೂ ಜನಪರ ಯೋಜನೆಯಾಗಲಿದೆ ಎಂದು ಸಚಿವರು ಹೇಳಿದರು. - ₹38.50 ಕೋಟಿ ಮೊತ್ತದ ಬ್ಯಾರೇಜ್ ಯೋಜನೆ (ಯಡಗೊಪ್ಪ, ಸೊರಬ):
ದಂಡಾವತಿ ನದಿಗೆ ಬ್ಯಾರೇಜ್ ನಿರ್ಮಿಸಿ 15 ಕೆರೆಗಳನ್ನು ತುಂಬಿಸುವ ಯೋಜನೆ. - ₹54.70 ಕೋಟಿ ಮೊತ್ತದ ದಂಡಾವತಿ ಮತ್ತು ವರದಾ ನದಿಗಳ ಮೇಲಿನ ಬ್ಯಾರೇಜ್ / ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ.
- ₹75.60 ಕೋಟಿ ವೆಚ್ಚದ ವರದಾ ನದಿಯ ಮೇಲಿನ ಬ್ಯಾರೇಜ್ (ಗುಡವಿ ಗ್ರಾಮ):
0.1017 ಟಿಎಂಸಿ ನೀರನ್ನು ಎತ್ತಿ 32 ಕೆರೆಗಳಿಗೆ ನೀರಿನ ಪೂರೈಕೆ ಮಾಡಲಾಗುತ್ತದೆ. - ₹54 ಕೋಟಿ ವೆಚ್ಚದ ಭದ್ರಾ ನದಿಯಿಂದ ನೀರು ಎತ್ತುವ ಯೋಜನೆ (ಗೋಣಿಬೀಡು, ಭದ್ರಾವತಿ):
0.19 ಟಿಎಂಸಿ ನೀರನ್ನು ಎತ್ತಿ ಗಾಜನೂರಿನಲ್ಲಿ ನಿರ್ಮಿಸಲಿರುವ ಟ್ಯಾಂಕ್‌ಗೆ ಪಂಪ್ ಮಾಡಲಾಗುವುದು.
ಚಂದ್ರಗುತ್ತಿ ಅಭಿವೃದ್ಧಿಗೆ ಪ್ರಾಧಿಕಾರ ಪ್ರಸ್ತಾವನೆ:
ಚಂದ್ರಗುತ್ತಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ 20 ಎಕರೆ ಜಮೀನನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಚಂದ್ರಗುತ್ತಿ ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೂಲಭೂತ ಸೌಕರ್ಯಗಳ ಒದಗಿಸಲು ಕೂಡ ಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಕ್ರೀಡಾಭಿವೃದ್ದಿಗೆ ಧ್ಯೇಯ:
ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಕ್ರೀಡಾಭಿವೃದ್ದಿಗೆ ಜೂನ್ 27 ರಂದು ಅಧಿಕಾರಿಗಳ ಹಾಗೂ ಪ್ರತಿನಿಧಿಗಳ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಶಿವಮೊಗ್ಗದ ನೆಹರು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ₹16.25 ಕೋಟಿ ಸೇರಿದಂತೆ ಒಟ್ಟಾರೆ ₹32.25 ಕೋಟಿ ಮೊತ್ತದ ಕ್ರೀಡಾಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.
ಶರಾವತಿ ಸಂತ್ರಸ್ತರ ನ್ಯಾಯ ಹೋರಾಟ ಮುಂದುವರಿಕೆ:
ಶರಾವತಿ ಪ್ರದೇಶದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ, ಸುಮಾರು 1800 ಕ್ಕೂ ಹೆಚ್ಚು ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಹಂತ ಹಂತವಾಗಿ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಒದಗಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಪಿಯುಸಿ ಪರೀಕ್ಷೆ ಫಲಿತಾಂಶ ಉತ್ತಮ:
ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಶೇ.79.81 ಫಲಿತಾಂಶ ದಾಖಲಾಗಿದೆ. ಹೊಸಬರ ಫಲಿತಾಂಶ ಶೇ.85.19 ಆಗಿದ್ದು, ಮೂರನೇ ಪರೀಕ್ಷೆಗೆ ಹಾಜರಾದ 1,11,002 ವಿದ್ಯಾರ್ಥಿಗಳ ಪೈಕಿ 22,446 (ಶೇ.20.22) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಷದ ಹಾಜರಾತಿ ಹಾಗೂ ಉತ್ತೀರ್ಣ ದರಗಳಲ್ಲಿ ಕಳೆದ ವರ್ಷದಿಗಿಂತ ಉತ್ತಮ ಸಾಧನೆ ಕಂಡುಬಂದಿದೆ. ಅಂಕ ಸುಧಾರಣೆಗೆ 17,398 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 11,937 ವಿದ್ಯಾರ್ಥಿಗಳು ತಮ್ಮ ಅಂಕ ಹೆಚ್ಚಿಸಿಕೊಂಡಿದ್ದಾರೆ.
ಸಾರ್ವಜನಿಕರಿಂದ ಅರ್ಜಿ ಸ್ವೀಕಾರ:
ಪತ್ರಿಕಾಗೋಷ್ಠಿಯ ನಂತರ ಸಚಿವರು ಸಾರ್ವಜನಿಕರಿಂದ 100ಕ್ಕೂ ಹೆಚ್ಚು ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್ , ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಆರ್. ಪ್ರಸನ್ನಕುಮಾರ್ ಹಾಗೂ ಇತರ ಪ್ರಮುಖ ಮುಖಂಡರು ಹಾಜರಿದ್ದರು.
Read more :ಸಾಗರ ತಾಲೂಕಿನಾದ್ಯಂತ ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಣೆ
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.