ಆನೆಗಳ ಆರೈಕೆಯಲ್ಲಿ ನಿರ್ಲಕ್ಷ್ಯ? ಸಕ್ರೆಬೈಲು ಆನೆ ಶಿಬಿರದಲ್ಲಿ ನೋವಿನಿಂದ ನರಳುತ್ತಿರುವ ವಿಕ್ರಾಂತ ಆನೆ

Written by Koushik G K

Published on:

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲು ಆನೆ ಶಿಬಿರದಲ್ಲಿ ಆನೆಗಳ ಪಾಲನೆ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದು, ವಿಶೇಷವಾಗಿ 30-35 ವರ್ಷದ ವಿಕ್ರಾಂತ್ ಆನೆಯ ನೋವು ಜಿಲ್ಲೆಯಾದ್ಯಂತ ಆಕ್ರೋಶ ಉಂಟುಮಾಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಿಂದ ಹಿಡಿದು ತರಲಾದ ಈ ಆನೆಯನ್ನ ಮರದ ಕಂಬಗಳ ಕ್ರಾಲ್‌ನಲ್ಲಿ ಕಟ್ಟಿಹಾಕಿ ಇಟ್ಟಿದ್ದು, ಅಲ್ಲಿ ಸರಿಯಾದ ಆರೈಕೆ ಸಿಗುತ್ತಿಲ್ಲವೆಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

WhatsApp Group Join Now
Telegram Group Join Now
Instagram Group Join Now

ಅಸಮರ್ಪಕ ಆರೈಕೆ – ಗಾಯಗೊಂಡ ವಿಕ್ರಾಂತ್

📢 Stay Updated! Join our WhatsApp Channel Now →

ಪರಿಸರ ಹಿತಾಸಕ್ತರು ಆರೋಪಿಸಿರುವ ಪ್ರಕಾರ, ಆನೆಯ ಆರೈಕೆಗೆ ನೇಮಿಸಲಾದ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಕ್ರೂರತೆಯಿಂದ ವಿಕ್ರಾಂತ್ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಶೇಷವಾಗಿ ಬಲ ಕಾಲು ಹಾಗೂ ಜಂಘೆಯ ಮೇಲೆ ಉಂಟಾದ ಗಾಯವು ತೀವ್ರಗೊಂಡಿದ್ದು, ಚಿಕಿತ್ಸೆ ತಡವಾದ ಕಾರಣ ಫೈಬ್ರೋಸಿಸ್ ಉಂಟಾಗಿದೆ ಎಂದು ಶಂಕಿಸಲಾಗಿದೆ. ಇದೀಗ ಗಾಯದಿಂದ ಪಸ್ ಹೊರಹೊಮ್ಮುತ್ತಿದ್ದು, ಪರಿಸರವಾದಿಗಳು ತೀವ್ರ ಚಿಂತೆ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಸೇವೆಯ ಕೊರತೆ

ಶಿಬಿರದಲ್ಲಿ ಆನೆಗಳಿಗೆ ಅಗತ್ಯ ಮಟ್ಟದ ಔಷಧೋಪಚಾರ ಹಾಗೂ ತಜ್ಞ ವೈದ್ಯರ ಕೊರತೆ ತೀವ್ರವಾಗಿದೆ. ಮಳೆಗಾಲದಲ್ಲಿ ಗಾಯದ ಮೇಲೆ ಮಣ್ಣು ಹಚ್ಚಿಕೊಂಡಿರುವುದರಿಂದ ಚೇತರಿಕೆ ಇನ್ನಷ್ಟು ನಿಧಾನವಾಗಿದೆ. ಮಾವುತರು ಬಳಸುವ ‘ಬರ್ಜಿ’ ಚುಚ್ಚುವ ವಿಧಾನ ಮಾನವೀಯವಲ್ಲ ಎಂಬ ವಾದ ಪರಿಸರ ಹೋರಾಟಗಾರರದು. ಬದಲಿಗೆ ಪಾಸಿಟಿವ್ ರೈನ್‌ಫೋರ್ಸ್‌ಮೆಂಟ್ ವಿಧಾನ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.

ದಶಕದಲ್ಲಿ 20ಕ್ಕೂ ಹೆಚ್ಚು ಆನೆ ಸಾವು

ಸಾಕ್ರೆಬೈಲು ಶಿಬಿರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 20 ಕ್ಕೂ ಹೆಚ್ಚು ಆನೆಗಳು ಸಾವಿಗೀಡಾಗಿರುವುದಲ್ಲದೆ, ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ವಿಕ್ರಾಂತ್‌ನ ನೋವು ಈಗ ಶಿವಮೊಗ್ಗ ಜಿಲ್ಲೆಯ ಆನೆ ಶಿಬಿರ ನಿರ್ವಹಣೆಯ ಸ್ಥಿತಿಗತಿ ಬಯಲಿಗೆಳೆದಿದೆ. ಶಿಬಿರದಲ್ಲಿ ಶಾಶ್ವತ ಪಶುವೈದ್ಯರ ನೇಮಕಾತಿ, ಆನೆಗಳ ಆರೈಕೆಯಲ್ಲಿ ಮಾನವೀಯ ವಿಧಾನ, ಮತ್ತು ಶಿಬಿರದ ಸಂಪೂರ್ಣ ಸುಧಾರಣೆಗಾಗಿ ತಜ್ಞರ ತಂಡವನ್ನು ಕಳುಹಿಸುವ ಅಗತ್ಯವಿದೆ.

ಜನರಲ್ಲಿ ಆಕ್ರೋಶ

ವಿಕ್ರಾಂತ್‌ನ ದುರಂತ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯ ಪರಿಸರ ಪ್ರೇಮಿಗಳು, ಪ್ರಾಣಿ ಹಿತಾಸಕ್ತರು ಹಾಗೂ ಜನ ಸಾಮಾನ್ಯರಲ್ಲೂ ಆಕ್ರೋಶ ಉಂಟುಮಾಡಿದೆ. “ಆನೆ ಶಿಬಿರ ಸುಧಾರಣೆಗೆ ಇದು ಎಚ್ಚರಿಕೆಯ ಗಂಟೆ” ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ.

Leave a Comment