ಶಿವಮೊಗ್ಗ ; ಜಿಲ್ಲೆಯಾದ್ಯಂತ ಗೌರಿ ಹಾಗೂ ಗಣೇಶ ಹಬ್ಬ ಸಡಗರ ಸಂಭ್ರಮದಿಂದ ಆರಂಭವಾಗಿದೆ.
ಮಲೆನಾಡಿನ ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಹೊಸನಗರ ಭಾಗದಲ್ಲಿ ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಕೆಲವರು, ಮೂರು ದಿನ ಮತ್ತೆ ಕೆಲವರು ಐದು ದಿನ ಗೌರಿ ಹಬ್ಬ ಆಚರಿಸುತ್ತಾರೆ.
ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್, ರವೀಂದ್ರನಗರ ಗಣಪತಿ ದೇವಾಲಯ, ಬಸವೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಗಿದೆ.

ಬೆಳಗ್ಗೆಯೇ ಶುಭ ಮುಹೂರ್ತದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ಮುತ್ತೈದೆಯರು ಕುಟುಂಬ ಸಮೇತ ಬಂದು ತಾಯಿಗೆ ಬಾಗಿನ ನೀಡಿ ಕುಟುಂಬದ ಸದಸ್ಯರ ಹೆಸರಿನಲ್ಲಿ ಪೂಜೆ ನೆರವೇರಿಸಿದರು.
ಮುತ್ತೈದೆ ಭಾಗ್ಯ ಕರುಣಿಸುವಂತೆ ದೇವಿಯಲ್ಲಿ
ಪ್ರಾರ್ಥಿಸಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ
ಮುಂಜಾನೆಯಿಂದಲೇ ಭಕ್ತರು ದೇವಾಲಯಗಳಿಗೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗೌರಿಹಬ್ಬ ಪ್ರಮುಖವಾಗಿ ಮಹಿಳೆಯರ ಹಬ್ಬವಾಗಿದ್ದು, ಇದಕ್ಕಾಗಿ ಮಹಿಳೆಯರು ಸಡಗರ-ಸಂಭ್ರಮದಿಂದ ಇಂದು ತಮ್ಮ ತಮ್ಮ ಮನೆಗಳಲ್ಲಿ ಹಬ್ಬದ ಸಡಗರದಲ್ಲಿ ಸಂಭ್ರಮಿಸುತ್ತಿದ್ದಾರೆ.
ಗಣೇಶ ಹಬ್ಬಕ್ಕೆ ಸಿದ್ಧತೆ ;
ಬಾಗಿನ ಕೊಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವಿಶೇಷ ಅಡುಗೆಗಳನ್ನು ಮಾಡಿ ಮನೆಮಂದಿಯೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಹಿಳೆಯರು ತವರು ಮನೆಗೆ ಬಂದು ಹಬ್ಬದ ಸಡಗರದಲ್ಲಿದ್ದಾರೆ.
ಯುವಕರು ಮತ್ತು ಮಕ್ಕಳ ಆರಾಧ್ಯ ದೈವ ಗಣಪತಿಯ ಪ್ರತಿಷ್ಠಾಪನೆಗೆ ಸಿದ್ದಮಾಡಿರುವ ಮಂಟಪಗಳಿಗೆ ಎಲ್ಲೆಡೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲು ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿತ್ತು. ನಾಳೆ ಗಣೇಶನ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಾರ್ವಜನಿಕರು ಮಾಡಿಕೊಳ್ಳುತ್ತಿದ್ದಾರೆ. ನಗರ ಹೊರವಲಯದ ಸೈನ್ಸ್ ಮೈದಾನದಲ್ಲಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದ್ದು, ತಾಲ್ಲೂಕು ಹಾಗೂ ಗ್ರಾಮೀಣ ಭಾಗಗಳಿಂದ ಜನರು ಆಗಮಿಸಿ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ವಿವಿಧ ಗಾತ್ರ ಮತ್ತು ವಿನ್ಯಾಸದ ಮೂರ್ತಿಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ.

ಹೆಚ್ಚುವರಿ ಬಸ್ ;
ಹಬ್ಬದ ಪ್ರಯುಕ್ತ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಇಲಾಖೆಯು ಹೆಚ್ಚುವರಿ ಬಸ್‌ಗಳನ್ನು ಸಜ್ಜುಗೊಳಿಸಿದೆ. ಪೊಲೀಸ್ ಇಲಾಖೆ ಮಾರುಕಟ್ಟೆ, ದೇವಾಲಯ ಮತ್ತು ಸಾರಿಗೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿದೆ. ಇನ್ನೊಂದೆಡೆ ಗಣಪತಿ ಪೆಂಡಾಲ್‌ಗಳು ಸಿದ್ಧವಾಗಿವೆ.
ಗಣೇಶನನ್ನು ಬರಮಾಡಿಕೊಳ್ಳಲು ಅಂತಿಮ ಸಿದ್ಧತೆಯಾಗುತ್ತಿದೆ. ಪೆಂಡಾಲ್‌ಗಳಲ್ಲಿ ಅಲಂಕಾರ ಮಾಡಲಾಗುತ್ತಿದೆ. ಅಲಂಕಾರ ಮತ್ತು ಪೂಜೆಗಾಗಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.
ಖರೀದಿ ಜೋರು :
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ. ಗೌರಿ ಹಬ್ಬ ಸಡಗರದಿಂದ ನಡೆದರೆ, ನಾಳಿನ ಗಣೇಶ ಹಬ್ಬಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.
ಹಬ್ಬಕ್ಕೆ ಮಳೆಯ ವಿಘ್ನ !
ಗೌರಿ ಹಬ್ಬ ಸಂಭ್ರಮದಿಂದ ಆಚರಿಸಿ ಗಣೇಶ ಚತುರ್ಥಿಗೆ ಪೂಜಾ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದ ಜನರಿಗೆ ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಬಿರುಸಿನ ಮಳೆ ಅಡ್ಡಿಯಾಯಿತು.
ಶಿವಮೊಗ್ಗ ನಗರ ಸೇರಿದಂತೆ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಬಿರುಸಿನಿಂದ ಮಳೆ ಸುರಿಯುತ್ತಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.