ಸಾಗರ ; ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ 3, 2026ರಂದು ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್. ನಾಗೇಂದ್ರ ಘೋಷಿಸಿದರು.
ಸೋಮವಾರ ದೇವಸ್ಥಾನ ಆವರಣದಲ್ಲಿ ಜಾತ್ರೆಯ ವಿವರಗಳ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಜಾತ್ರೆ ಸಂಬಂಧಿತ ಚರ್ಚೆ ಪೂರ್ಣಗೊಂಡಿದ್ದು, ಮುಹೂರ್ತವನ್ನು ನಿಗಧಿಪಡಿಸಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ 2025ರ ಡಿಸೆಂಬರ್ 23ರಂದು ಮರ ಕಡಿಯುವ ಶಾಸ್ತ್ರ, 2026ರ ಜನವರಿ 27ರಂದು ಅಂಕೆ ಹಾಕುವ ಶಾಸ್ತ್ರ ನೆರವೇರಲಿದೆ.
ಫೆಬ್ರವರಿ 3ರಂದು ತವರು ಮನೆಯಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯಲಿದ್ದು, ರಾತ್ರಿ ಅಮ್ಮನವರ ಮೆರವಣಿಗೆಯ ನಂತರ ಗಂಡನ ಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ನೆರವೇರಲಿದೆ. ಫೆ.11ರಂದು ದೇವಿಯನ್ನು ವನಕ್ಕೆ ಬಿಡುವ ಶಾಸ್ತ್ರ, ಫೆ.15ರಂದು ಅಂಕೆ ತೆಗೆಯುವ ಶಾಸ್ತ್ರ ಹಾಗೂ ಕೋಣವನ್ನು ಬಿಡುವ ಸಂಪ್ರದಾಯ ನಡೆಯಲಿದೆ. ಸಾರ್ವಜನಿಕರಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡುವ ಉದ್ದೇಶದಿಂದ ಆರು ತಿಂಗಳ ಮೊದಲು ದಿನಾಂಕ ಘೋಷಿಸಲಾಗಿದೆ ಎಂದು ತಿಳಿಸಿದರು.
ಗಂಡನ ಮನೆ ದೇವಸ್ಥಾನದ ಪ್ರಧಾನ ಅರ್ಚಕ ರವಿ ಪೋತರಾಜ ಮಾತನಾಡಿ, “ಅರಸರ ಕಾಲದಿಂದಲೂ ಸಾಗರದ ಮಾರಿಕಾಂಬಾ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತ ಬಂದಿದೆ. ಜನವರಿ 27ರಂದು ಅಂಕೆ ಹಾಕಿದ ನಂತರ ಧಾರ್ಮಿಕ ಕಟ್ಟುಪಾಡುಗಳ ಕಾರಣ ಕೆಲವು ಶುಭಕಾರ್ಯಗಳಲ್ಲಿ ನಿರ್ಬಂಧ ಇರುತ್ತದೆ. ಈ ಕಾರಣಕ್ಕೆ ಮುಂಚಿತವಾಗಿ ದಿನಾಂಕ ಪ್ರಕಟಿಸಿರುವುದು ಒಳ್ಳೆಯ ನಿರ್ಧಾರ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಬಿ.ಜಿ. ಗಿರಿಧರ ರಾವ್, ಕೋಶಾಧಿಕಾರಿ ನಾಗೇಂದ್ರ ಕುಮಟಾ, ನವೀನ್, ದಿನೇಶ್ ಡಿ., ನಾರಾಯಣ ಅರಮನೆಕೇರಿ, ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
2025–26ರ ಜಾತ್ರಾ ವೇಳಾಪಟ್ಟಿ:
- ಡಿಸೆಂ. 23, 2025 – ಮರ ಕಡಿಯುವ ಶಾಸ್ತ್ರ
- ಜನ. 27, 2026 – ಅಂಕೆ ಹಾಕುವುದು
- ಫೆ. 3, 2026 – ತವರುಮನೆ ಪ್ರತಿಷ್ಠಾಪನೆ, ಮೆರವಣಿಗೆ, ಗಂಡನ ಮನೆ ಪ್ರತಿಷ್ಠಾಪನೆ
- ಫೆ. 11, 2026 – ವನ ಬಿಡುವ ಶಾಸ್ತ್ರ
- ಫೆ. 15, 2026 – ಅಂಕೆ ತೆಗೆಯುವುದು, ಕೋಣ ಬಿಡುವ ಶಾಸ್ತ್ರ
ಸಾಗರದ ಜನತೆಗೆ ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಿಂದ ಬರುವ ಭಕ್ತರಿಗೆ ಈ ಜಾತ್ರೆ ಮಹೋತ್ಸವದಂತೆಯೇ ಪರಿಣಮಿಸುವ ನಿರೀಕ್ಷೆಯಿದೆ.
ಗಣಪತಿ ಬ್ಯಾಂಕ್ ಮೂರು ಶಾಖೆಗಳಿಂದ ₹ 3.61 ಕೋಟಿ ಲಾಭ ; ಲಲಿತಾಂಬಿಕೆ | ಕಟ್ಟೆಹಕ್ಕಲು ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650