ಸಂದೇಶ ನೀಡುವ ರಚನಾತ್ಮಕ ಚಲನಚಿತ್ರಗಳು ಮೂಡಿಬರಲಿ: ಮಧು ಬಂಗಾರಪ್ಪ

Written by Koushik G K

Published on:

ಶಿವಮೊಗ್ಗ: “ರಾಜಕಾರಣದಲ್ಲಿ ಜಾತಿ, ಧರ್ಮದ ಸೋಂಕು ತಗುಲಿರುವ ಈ ಕಾಲದಲ್ಲಿ, ಸಮಾಜಕ್ಕೆ ಹಿತದ ಸಂದೇಶ ನೀಡುವ ಹಾಗೂ ಮನೋರಂಜನೆಯ ಜೊತೆಗೆ ಜಾಗೃತಿ ಮೂಡಿಸುವ ರಚನಾತ್ಮಕ ಚಲನಚಿತ್ರಗಳ ನಿರ್ಮಾಣವಾಗಬೇಕು” ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಹಾಗೂ ಶಿವಮೊಗ್ಗ ಚಿತ್ರಸಮಾಜದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರರಂಗದ ಸವಾಲುಗಳು ಮತ್ತು ಸಾಧನೆಗಳು

ಚಿತ್ರರಂಗದಲ್ಲಿ ಹಲವು ಸಮಸ್ಯೆಗಳಿದ್ದರೂ ತಜ್ಞರು ಹಾಗೂ ಕಲಾವಿದರ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ರಾಜ್ಯದ ಚಿತ್ರರಂಗ ಜೀವಂತವಾಗಿದೆ. “ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಸಹಾಯದಿಂದ ರಾಜ್ಯದ ನಿರ್ಮಾಪಕರು ಇನ್ನು ಮಡ್ರಾಸ್‌ಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ನಾನು ನಿರ್ಮಾಪಕರಾಗಿದ್ದ ಕಾಲದಲ್ಲಿ ಸ್ಥಾಪಿಸಿದ ಆಕಾಶ್ ಆಡಿಯೋ ಸಂಸ್ಥೆಯ ನೆನಪು ಇಂದಿಗೂ ತಾಜಾ” ಎಂದು ಮಧು ಬಂಗಾರಪ್ಪ ಹೇಳಿದರು.

ಶಿಕ್ಷಣ ಮತ್ತು ಕಲೆಗಳ ಮಹತ್ವ

“ದೇವಾಲಯದ ಗಂಟೆಗಿಂತ ಶಾಲೆಯ ಗಂಟೆ ಸದ್ದು ಮುಖ್ಯ. ಅದು ಯುವ ಪೀಳಿಗೆಯ ಭವಿಷ್ಯ ರೂಪಿಸುತ್ತದೆ. ಶಿಕ್ಷಣ ಸಮಾಜಕ್ಕೆ ಸ್ಥಾನಮಾನ ನೀಡುತ್ತದೆ” ಎಂದ ಅವರು, ಶಿವಮೊಗ್ಗ ದಸರಾ ಅಂಗವಾಗಿ ಏರ್ಪಡಿಸಿದ್ದ ಚಲನಚಿತ್ರಗಳ ಛಾಯಾಚಿತ್ರ ಪ್ರದರ್ಶನ ಅತ್ಯಂತ ವಿಶಿಷ್ಟವಾಗಿದೆ ಎಂದರು.

ಶಾಸಕ ಚನ್ನಬಸಪ್ಪ ಮಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, “ರಾಜ್ಯ ಸರ್ಕಾರದಿಂದ 50 ಲಕ್ಷ ರೂ. ನೆರವಿನಿಂದ 2.50 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅನೇಕ ವೇದಿಕೆಗಳ ಮೂಲಕ ಸಹಸ್ರಾರು ಕಲಾವಿದರಿಗೆ ಅವಕಾಶ ದೊರೆಯುತ್ತಿದೆ” ಎಂದು ಹೇಳಿದರು.

ಕಲಾವಿದರ ಪ್ರತಿಕ್ರಿಯೆಗಳು

“ಸವಾಲುಗಳಿಂದ ಬೆಳ್ಳಿ ತೆರೆ ತನ್ನ ಕಳೆ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಕಲಾವಿದರನ್ನು ಪ್ರೋತ್ಸಾಹಿಸುವ ಮನಸ್ಸುಗಳು ಸಮಾಜದಲ್ಲಿ ಮೂಡಬೇಕು” ಎಂದು ಹಾಸ್ಯನಟ ಶರಣ್ ಅಭಿಪ್ರಾಯಪಟ್ಟರು.”ಶಿವಮೊಗ್ಗವು ಕಲೆ, ಸಾಹಿತ್ಯ, ಸಿನಿಮಾ, ರಂಗಭೂಮಿ, ರಾಜಕಾರಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ. ವಿಶ್ವ ನಕ್ಷೆಯಲ್ಲಿ ಗುರುತಿಸಿಕೊಳ್ಳುವಂತ ಜಿಲ್ಲೆಯಾಗಿದೆ” ಎಂದು ನಟಿ ಕಾರಣ್ಯರಾಮ್ ಹೇಳಿದರು.

ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎಸ್.ಹೆಚ್. ಸುಂದರೇಶ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ರೇಖಾ ರಂಗನಾಥ್, ನಾಗರಾಜ ಕಂಕಾರಿ, ವಿಶ್ವಾಸ್, ಬಿಂಬಶ್ರೀ, ಫಾಲಾಕ್ಷಿ, ಕೃಪಾಕರ, ಅಚ್ಯುತ ನಾರಾಯಣ್ ಸೇರಿದಂತೆ ಗಣ್ಯರು ಹಾಜರಿದ್ದರು.

ಹೊಸನಗರ ; ತಾಲ್ಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Leave a Comment