ಶಿವಮೊಗ್ಗ : ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಹೊಸ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕರಿಸಿದರು.
ಭರ್ಜರಿ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕಾರ
ನಗರದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಶ್ವೇತಾ ಬಂಡಿ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಪಕ್ಷದ ಧ್ವಜ ಹಸ್ತಾಂತರಿಸಿ, ನೂತನ ಅಧ್ಯಕ್ಷೆಗೆ ಜವಾಬ್ದಾರಿ ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಅಭ್ಯರ್ಥಿ ಹಾಗೂ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್, ಹಿಂದಿನ ಜಿಲ್ಲಾ ಅಧ್ಯಕ್ಷೆ ಅನಿತಾ ಕುಮಾರಿ ಸೇರಿದಂತೆ ಅನೇಕರು ಭಾಗವಹಿಸಿದರು.
ಮಹಿಳೆಯರ ಸಾಮರ್ಥ್ಯದ ಕುರಿತು ಗೀತಾ ಶಿವರಾಜ್‌ಕುಮಾರ್ ಅಭಿಪ್ರಾಯ
ಗೀತಾ ಶಿವರಾಜ್‌ಕುಮಾರ್ ಮಾತನಾಡಿ, “ಮಹಿಳೆಯರು ಅಬಲೆಯರಲ್ಲ, ದೊಡ್ಡ ಸಾಧನೆ ಮಾಡಲು ಸಿದ್ಧರಾಗಿದ್ದಾರೆ. ಶ್ವೇತಾ ಬಂಡಿ ನನ್ನ ಚುನಾವಣಾ ಪ್ರಚಾರದಲ್ಲಿ ಜೊತೆಗಿದ್ದರು. ಅವರು ಇಂದು ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿರುವುದು ಹೆಮ್ಮೆಯ ವಿಷಯ. ಅಧಿಕಾರ ಎಂದರೆ ಒಬ್ಬರದ್ದು ಅಲ್ಲ, ಅದು ಜನಪರ ಸೇವೆಗೆ ಉಪಯೋಗವಾಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳಾ ನಾಯಕರ ಮೆಚ್ಚುಗೆ
ವಿಧಾನ ಪರಿಷತ್ ಸದಸ್ಯೆ ಬಲ್ಲೀಶ್‌ಬಾನು ಮಾತನಾಡಿ, “ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತಿರುವುದು ಖುಷಿಯ ಸಂಗತಿ. ಮಂಜುನಾಥ್ ಭಂಡಾರಿ ಅವರ ನೇತೃತ್ವದಲ್ಲಿ ಇದು ಸಾಧ್ಯವಾಗಿದೆ” ಎಂದರು.
ಹಿಂದಿನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಅವರು, “ಮಹಿಳೆಯರು ನೋವು-ಸವಾಲುಗಳನ್ನು ಎದುರಿಸಿ ಸಾರ್ವಜನಿಕ ಕ್ಷೇತ್ರಕ್ಕೆ ಬರುತ್ತಾರೆ. ಅವರಿಗೆ ಉತ್ತೇಜನ ಮತ್ತು ಬೆಂಬಲ ಅತ್ಯಗತ್ಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಂಜುನಾಥ್ ಭಂಡಾರಿ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಕಾಂಗ್ರೆಸ್ ಮುಖಂಡ ಆರ್. ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ರಾಜ್ಯ ಜವಳಿ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಅವರು, “ಅಧಿಕಾರ ಭಾರದ ವಿಷಯ, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದಾಗ ಮಾತ್ರ ಸಮಾಜಕ್ಕೆ ಉಪಯೋಗವಾಗುತ್ತದೆ” ಎಂದು ಹೇಳಿದರು.
ಶೋಷಿತ ಮಹಿಳೆಯರ ಧ್ವನಿಯಾಗುವೆ: ಶ್ವೇತಾ ಬಂಡಿ
ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ, “ಇದು ನನ್ನ ಜೀವನದ ಐತಿಹಾಸಿಕ ಕ್ಷಣ. ತುಂಗಾ-ಭದ್ರಾ ನದಿಗಳ ಶಕ್ತಿಯಂತೆ ಮಹಿಳಾ ಶಕ್ತಿಯ ನಡುವೆ ನಾನು ಅಧಿಕಾರ ಸ್ವೀಕರಿಸಿದ್ದೇನೆ. ಇದು ಕೇವಲ ಹುದ್ದೆಯಲ್ಲ, ಜವಾಬ್ದಾರಿ. ಶೋಷಿತ ಮಹಿಳೆಯರ ಧ್ವನಿಯಾಗುವುದು ನನ್ನ ಉದ್ದೇಶ. ಇಂದಿರಾ ಗಾಂಧಿಯವರ ಸ್ಫೂರ್ತಿ ನಮ್ಮೆಲ್ಲರಿಗೂ ಮಾದರಿ. ಮಹಿಳಾ ಸಬಲೀಕರಣ ಕೇವಲ ಘೋಷಣೆಯಾಗದೆ, ಬದುಕಿನ ಭಾಗವಾಗಬೇಕು” ಎಂದು ಸ್ಪಷ್ಟಪಡಿಸಿದರು.
ವರ್ಣವೈಭವ ವಸ್ತ್ರಾಲಂಕಾರ ಶೋಭಿತ ಅಭೀಷ್ಟವರಪ್ರದಾಯಿನಿ ಸರ್ವರ ರಕ್ಷಕಿ ; ಹೊಂಬುಜ ಶ್ರೀ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650