ಹೊಸನಗರ ; ಜಲಜೀವನ್ ಮಿಷನ್ ಯೋಜನೆಯಡಿ ಎಂ. ಗುಡ್ಡೆಕೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು ಸೋಮವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.
ಟೆಂಡರ್ ಪಡೆದ ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಡೆಸಿಲ್ಲ. ಪೈಪ್‌ಲೈನ್ ಅಳವಡಿಸುವಲ್ಲಿ ಮಾನದಂಡಗಳನ್ನು ಪಾಲಿಸಿಲ್ಲ. ಗುಣಮಟ್ಟ ಕಾಪಾಡುವಲ್ಲಿ ವಿಫಲರಾಗಿದ್ದು, ಹಲವೆಡೆ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಹಲವು ಕುಟುಂಬಗಳಿಗೆ ಸರಿಯಾಗಿ ಕುಡಿವ ನೀರು ದೊರೆಯುತ್ತಿಲ್ಲ. ಅರೆಬರೆ ಕಾಮಗಾರಿ ಕೈಗೊಂಡಿದ್ದು, ಜನಪ್ರತಿನಿಧಿಗಳು ಜನರಿಂದ ಬೈಗುಳ ಕೇಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಕಾಮಗಾರಿಯ ಲೋಪಗಳನ್ನು ಸರಿಪಡಿಸಬೇಕು. 15 ದಿನಗಳ ಒಳಗಾಗಿ ವ್ಯವಸ್ಥೆ ಸರಿಯಾಗದಿದ್ದಲ್ಲಿ, ತಾಲೂಕು ಕೇಂದ್ರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದು ಅನಿವಾರ‍್ಯವಾಗಲಿದೆ ಎಂದು ತಿಳಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





