ಹೊಸನಗರ ; ಪ್ರತಿ ವ್ಯಕ್ತಿಯ ಬದುಕು ಚಲನಶೀಲವಾಗಿ ಇರಬೇಕು ಎಂದಾದರೆ ಕಣ್ಣುಗಳ ಆರೋಗ್ಯ ಸಂರಕ್ಷಣೆ ಅತೀ ಅಗತ್ಯ ಎಂದು ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.
ಇಂದು ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲವು ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 14ನೇ ನೇತ್ರ ಶಿಬಿರ ಉದ್ಘಾಟಸಿ ಅವರು ಮಾತನಾಡಿದರು.
ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ಹರಿದ್ರಾವತಿ ಇವರುಗಳ ಜಂಟಿ ಸಹಕಾರದಲ್ಲಿ ಹಮ್ಮಿಕೊಂಡಿದ್ದ ನೇತ್ರ ಶಿಬಿರವು ಸ್ಥಳೀಯ ಸಂಘ ಸಂಸ್ಥೆ ಮತ್ತು ರಾಜಕೀಯ ಪ್ರಾತಿನಿಧಿಕ ಸಂಸ್ಥೆಗಳು ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ಈ ಶಿಬಿರ ಅತ್ಯುತ್ತಮ ಉದಾಹರಣೆಯಾಗಿದೆ. ಈ ನಿಟ್ಟಿನಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ನಿರಂತರ 14 ಶಿಬಿರ ಆಯೋಜಿಸುತ್ತ ಬಂದಿರುವುದು ಈ ಭಾಗಕ್ಕೆ ದಾಖಲೆಯ ಸೇವಾ ಕಾರ್ಯ ಎಂದು ಮಂಜುನಾಥ್ ಶ್ಲಾಘಿಸಿದರು.
ಗ್ರಾ.ಪಂ. ಸದಸ್ಯ ಹೀಲಗೋಡು ಗೋಪಾಲ್ ಮಾತನಾಡಿ, ಇಂತಹ ನೇತ್ರ ಶಿಬಿರಗಳು ಹಿರಿಯರ ಪಾಲಿಗೆ ದಾರಿ ದೀಪವಾಗಿವೆ. ಇದುವರೆಗಿನ ಶಿಬಿರಗಳಲ್ಲಿ ನೂರಾರು ಹಿರಿಯ ಜೀವಗಳು ನೋಡುವ ಭಾಗ್ಯ ಪಡೆದುಕೊಂಡಿವೆ. ಇದರ ಪುಣ್ಯ ಶಿಬಿರದ ಆಯೋಜಕರಿಗೆ ಸಲ್ಲಬೇಕು. ಇಂತಹ ಸಂದರ್ಭದಲ್ಲಿ ನಾವೂ ಅವರುಗಳ ಜೊತೆ ಕೈ ಜೋಡಿಸಿದಲ್ಲಿ ಆ ಪುಣ್ಯ ಕಾರ್ಯದಲ್ಲಿ ನಮಗೂ ಪಾಲು ಲಭಿಸುತ್ತದೆ. ಹೀಗಾಗಿ ರಾಜಕಾರಣಗಳು ಕೇವಲ ಪ್ರಚಾರದ ಗೀಳು ಬಿಟ್ಟು ಇಂತಹ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.

ಗುರುಕುಲದ ಮಾರ್ಗದರ್ಶಕ, ನಿವೃತ್ತ ಸೇನಾನಿ ಕೆ. ಪಿ. ಕೃಷ್ಣಮೂರ್ತಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ 15 ವರ್ಷಗಳಿಂದ ಇಂತಹ ಸೇವಾ ಕಾರ್ಯಗಳ ಜೊತೆಗೆ ಮಕ್ಕಳಿಗೆ ಶಿಕ್ಷಣ ದೊಂದಿಗೆ ಮೌಲ್ಯ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದೆ. ಇದರಿಂದ ನಮ್ಮ ಮಕ್ಕಳಿಗೆ ಹಿರಿಯರಿಗೆ ನೀಡಬೇಕಾದ ಆದ್ಯತೆ ಪಾಠವನ್ನೂ ಅಭ್ಯಾಸ ಮಾಡಿದಂತಾಗುತ್ತಿದೆ. ನೇತ್ರ ಶಿಬಿರ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳ ಮೂಲಕ ನಮ್ಮ ಮಕ್ಕಳಿಗೆ ಮಾನವೀಯ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದರು.
ಗ್ರಾ.ಪಂ.ನಿಂದ ಇಸಿಜಿ ಯಂತ್ರ ಕೊಡುಗೆ ;
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆಡಳಿತದಿಂದ ಸ್ಥಳೀಯ ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೃದಯ ತಪಾಸಣೆಯ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.

ಯಂತ್ರ ಸ್ವೀಕರಿಸಿ ಮಾತನಾಡಿದ ಇಲ್ಲಿನ ವೈದ್ಯಧಿಕಾರಿ ಡಾ. ಗೌತಮ್, ಸ್ಥಳೀಯ ಆಡಳಿತದ ಸಹಕಾರ ಇದ್ದಲ್ಲಿ ಆರೋಗ್ಯ ಸೇವೆಯನ್ನೂ ಉತ್ತಮ ಪಡಿಸಬಹುದು. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಆಧುನಿಕ ವೈದ್ಯಕೀಯ ಉಪಕರಣ ನೀಡುವುದರಿಂದ ಗುಣಮಟ್ಟದ ಸೇವೆ ನೀಡಲು ಸಾಧ್ಯ ಎಂದರು.
ಶಿಬಿರದಲ್ಲಿ ಸುಮಾರು 22 ಮಂದಿ ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಆಗಿ ಉಡುಪಿ ಪ್ರಸಾದ್ ನೇತ್ರಾಲಯಕ್ಕೆ ಕರೆದೊಯ್ಯಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯೆ ಸೀತಾ ಸಂತೋಷ್, ಮಾರುತಿಪುರ ಗ್ರಾ.ಪಂ. ಸದಸ್ಯ ಶಂಕರ್ ಶೆಟ್ಟಿ. ಗ್ರಾ.ಪಂ. ಪಿಡಿಒ ರಾಘವೇಂದ್ರ, ಗುರುಕುಲದ ಕಾರ್ಯದರ್ಶಿ ರಶ್ಮಿ ಬಿ.ಹೆಚ್, ಸುಮಾ ನವೀನ್, ಹಿರಿಯ ಆರೋಗ್ಯಧಿಕಾರಿಗಳಾದ ಸದಾಶಿವಪ್ಪ, ಪ್ರಭಾಕರ್, ಮಂಜುನಾಥ್ ಚೂರಿ, ಮಂಜಯ್ಯ ಉಪಸ್ಥಿತರಿದ್ದರು.

ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರೆ ಮಂಜುನಾಥ್ ಎಸ್. ಬ್ಯಾಣದ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





