ರಿಪ್ಪನ್ಪೇಟೆ ; ಒತ್ತುವರಿ ನೆಪದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಕಾಡುಜಾತಿಯ ಮರಗಳ ಬುಡಕ್ಕೆ ಬೆಂಕಿಯಿಟ್ಟು ಕಾಡು ನಾಶ ಮಾಡಲಾಗುತ್ತಿದ್ದರೂ ಕೂಡಾ ಅರಣ್ಯ ಇಲಾಖೆಯವರು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಅತ್ತ ಕಡೆ ತಲೆ ಹಾಕಿಲ್ಲ ಎಂದು ಸಾರ್ವಜನಿಕರು ಇಲಾಖೆಯವರ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರಾದರೂ ಬಡವರು ಮನೆ ಕಟ್ಟಿಕೊಳ್ಳಲು ಮರಗಳನ್ನು ಕಡಿದರೆ ಸಾಕು ಅವರ ಮನೆಯ ಮುಂದೆ ಸಾಲುಗಟ್ಟಿ ನಿಂತು ಕೇಸ್ ದಾಖಲಿಸಿ ಜೈಲಿಗೆ ಅಟ್ಟುತ್ತಾರೆ. ಆದರೆ ಶ್ರೀಮಂತರು ಅರಣ್ಯ ಜಾಗವನ್ನು ಒತ್ತುವರಿ ಮಾಡುತ್ತಲೆ ಇದ್ದರೂ ಕೂಡಾ ಇಲಾಖೆವರು ತಮ್ಮ ಕಿಸೆ ತುಂಬಿಸಿಕೊಂಡು ಅತ್ತ ಕಡೆ ಸುಳಿಯದೆ ಕಣ್ಣಿದ್ದು ಕುರುಡರಂತಾಗಿದ್ದಾರೆಂದು ಪರಿಸರಾಸಕ್ತರು ಮಾಧ್ಯಮದವರ ಮುಂದೆ ದೂರಿದರು.

ಇತ್ತೀಚೆಗೆ ಅಂದರೆ ಕಳೆದ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹೊಸನಗರ ವಲಯ ವ್ಯಾಪ್ತಿಯ ಕುಕ್ಕಳಲೆ, ಕರಿಗೆರಸು, ಕೋಟೆತಾರಿಗ, ಜಂಬಳ್ಳಿ, ಅಮೃತ, ಕಲ್ಲುಕೊಪ್ಪ, ಹಾಲಂದೂರು ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಾಡು ಜಾತಿಯ ಮರಗಳ ಮಾರಣಹೋಮ ನಡೆದಿರುವ ಬಗ್ಗೆ ಮಲ್ನಾಡ್ ಟೈಮ್ಸ್ ಸೇರಿದಂತೆ, ರಾಜ್ಯ ಮಟ್ಟದ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದು ಆಗ ಇಲಾಖೆ ಹಿರಿಯ ಆಧಿಕಾರಿಗಳು ವಿಶೇಷ ತನಿಖಾ ತಂಡವನ್ನು ನೇಮಿಸಿ ತನಿಖಾ ತಂಡದ ಮಧುಸೂಧನ್ ನೇತೃತ್ವ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ನಡೆಸಿ ಅದರ ವರದಿಯಲ್ಲಿ ಸಾಕಷ್ಟು ಅರಣ್ಯ ನಾಶಗೊಳಿಸಲಾಗಿರುವ ಬಗ್ಗೆ ವರದಿ ನೀಡಿದ್ದು ಅದರ ಸಮಗ್ರ ವರದಿ ಪತ್ರಿಕೆ, ಮಾಧ್ಯಮಗಳಲ್ಲಿ ಸಹ ಪ್ರಕಟಗೊಂಡರು ಕೂಡಾ ಇಲಾಖೆಯವರು ಇನ್ನು ಜಾಗೃತವಾಗದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೊಸನಗರ ವಲಯ ವ್ಯಾಪ್ತಿಯಲ್ಲಿ ಬರುವ ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದ್ದು ಇಲಾಖೆಯ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯದಿಂದಿರುವುದರ ಹಿಂದಿನ ಮರ್ಮವೇನು ಎಂಬುದು ತಿಳಿಯದಂತಾಗಿದೆ.
ಒಟ್ಟಾರೆಯಾಗಿ ಮಲೆನಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಯ ಅರಣ್ಯ ಭೂ ಪ್ರದೇಶದಲ್ಲಿ ಮರಳು, ಜಂಬಿಟ್ಟಿಗೆ, ಕಲ್ಲುಕ್ವಾರಿಯ ಗಣಿಗಾರಿಕೆ, ಅಕ್ರಮ ಒತ್ತುವರಿ ಹೆಸರಿನಲ್ಲಿ ದಟ್ಟ ಅರಣ್ಯ ನಾಶವಾಗುವಂತಾಗಿದ್ದು ಈಗ ಬೆಲೆ ಬಾಳುವಂತಹ ಕಾಡು ಜಾತಿಯ ಮರಗಳ ಬುಡಕ್ಕೆ ದುರುಳರು ಬೆಂಕಿ ಹಚ್ಚುವ ಮೂಲಕ ಅರಣ್ಯವನ್ನು ಬುಡಸಹಿತ ನಾಶ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.
ಹೊನ್ನೆ, ಮತ್ತಿ, ಸಾಗುವಾನಿ, ಹಲಸು, ತೇಗ, ಶಿವಣೆ ಹೀಗೆ ವಿವಿಧ ಕಾಡುಜಾತಿಯ ಮರಗಳ ಮಾರಣಹೋಮ ಅವ್ಯಾಹತವಾಗಿ ನಡೆಯುತ್ತಿದ್ದು ಇನ್ನಾದರೂ ಅರಣ್ಯ ಇಲಾಖೆಯವರು ಒತ್ತುವರಿ ನೆಪದಲ್ಲಿ ಮರದ ಬುಡಕ್ಕೆ ಬೆಂಕಿ ಇಡುವ ದುರುಳರನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳುವರೆ ಕಾದು ನೋಡಬೇಕಾಗಿದೆ.

ಕಾಡಿಗೆ ಬೆಂಕಿ ಬಿದ್ದಿದೆ ಎಂದು ಬೆಂಗಳೂರು ಅರಣ್ಯ ಭವನದಲ್ಲಿರುವ ಅಧಿಕಾರಿಗಳಿಗೆ ಉಪಗ್ರಹದಲ್ಲಿ ಇಂತಹದೇ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ ಎಂದು ತಿಳಿಯುವ ಇಂತಹ ತಂತ್ರಜ್ಞಾನ ಯುಗದಲ್ಲಿ ಹೊಸನಗರ ವಲಯ ವ್ಯಾಪ್ತಿಯ ಜಂಬಳ್ಳಿ-ಹರಿದ್ರಾವತಿ ಅರಣ್ಯ ಪ್ರದೇಶದಲ್ಲಿ ಮರದ ಬುಡಕ್ಕೆ ಬೆಂಕಿ ಬಿದ್ದು ಎರಡ್ಮೂರು ದಿನಗಳಾದರೂ ಕೂಡಾ ಗಮನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪರಿಸರ ಪ್ರೇಮಿಗಳು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





