ಪಡಿತರ ವಿತರಣಾ ಕೇಂದ್ರಗಳಲ್ಲಿ ಶುಚಿತ್ವ ಶೂನ್ಯ ; ಹೊಸನಗರ ಗ್ಯಾರಂಟಿ ಸಭೆಯಲ್ಲಿ ಭಾರೀ ಚರ್ಚೆ, ಪಡಿತರ ವಿತರಣಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡುವಂತೆ ಆಹಾರ ಜಾಗೃತಿ ಸಮಿತಿಗೆ ಸೂಚನೆ

Written by Mahesha Hindlemane

Published on:

ಹೊಸನಗರ : ತಾಲೂಕಿನ ಕೆಲವು ಪಡಿತರ ವಿತರಣಾ ಕೇಂದ್ರಗಳ ಗೋದಾಮಿನಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ. ಕಾಲ್ತುಳಿತದ ಅಕ್ಕಿ, ಧಾನ್ಯಗಳನ್ನೆ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಮಾರಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂಬ ಸಾರ್ವಜನಿಕ ದೂರುಗಳ ಕೇಳಿ ಬಂದಿದ್ದು, ಈ ಕೂಡಲೇ ತಾಲ್ಲೂಕಿನ ಆಹಾರ ಜಾಗೃತಿ ಸಮಿತಿ ಸದಸ್ಯರು ತಂತಮ್ಮ ವ್ಯಾಪ್ತಿಯ ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಶುಚಿತ್ವ ಕುರಿತು ಜಾಗೃತಿ ಮೂಡಿಸುವಂತೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೂವಿನಕೋಣೆ ಚಿದಂಬರ ಆಹಾರ ಜಾಗೃತಿ ಸಮಿತಿ ಸದಸ್ಯರಿಗೆ ಸೂಚನೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹಾರ ಜಾಗೃತಿ ಸಮಿತಿ ಸದಸ್ಯರು ಆಗಿಂದಾಗ್ಗೆ ಪಡಿತರ ವಿತರಣಾ ಕೇಂದ್ರಗಳ ಮೇಲೆ ಅನಿರೀಕ್ಷಿತ ಭೇಟಿ ನೀಡಿ, ಫಲಾನುಭವಿಗಳ ಅಹವಾಲು ಆಲಿಸಬೇಕು. ಸಮಸ್ಯೆಗಳು ಕಂಡು ಬಂದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ತಪ್ಪಿದಲ್ಲಿ ಸಮಸ್ಯೆ ಕುರಿತು ತಹಸಿಲ್ದಾರ್ ಅವರ ಗಮನ ಸೆಳೆಯುವ ಕಾರ್ಯ ಮಾಡಬೇಕೆಂದರು.

ತಾಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿಂತಿಲ್ಲ. 110 ಕೆ.ವಿ ಕೇಂದ್ರ ಸ್ಥಾಪನೆಗೆ ಸೂಕ್ತ ಸ್ಥಳಾವಕಾಶ ಹಾಗೂ 33 ಕೆ.ವಿ.ಯ ಎರಡು ಪ್ರತ್ಯೇಕ ಲೈನ್ ಅಳವಡಿಕೆಗೆ ಸೂಕ್ತ ಡಿಪಿಆರ್ ಬೇಗ ರಚಿಸಿ ಕೊಡಿ. ವಿದ್ಯುತ್ ವ್ಯತ್ಯಯ ತಾಲೂಕಿಗೆ ಶಾಪವಾಗಿ ಪರಿಣಮಿಸಿದೆ. ದೀಪದ ಕೆಳಗೆ ಕತ್ತಲು ಎನ್ನವಂತಿದೆ ನಮ್ಮ ಪರಿಸ್ಥಿತಿ. ಶಾಶ್ವತ ವಿದ್ಯುತ್ ನೀಡಲು ಶಾಸಕರು ಉತ್ಸುಕರಾಗಿದ್ದು, ವಿಷಯ ವಿಧಾನಸಭೆಯ ಅಧಿವೇಶನದಲ್ಲಿ ಶೀಘ್ರದಲ್ಲೇ ಚರ್ಚೆ ಮಾಡಿ ಸರಕಾರದ ಗಮನ ಸೆಳದು ಶಾಶ್ವತ ಪರಿಹಾರಕ್ಕೆ ಶಾಸಕ ಬೇಳೂರು ಪ್ರಾಮಾಣಿಕ ಪ್ರಯತ್ನದಲ್ಲಿದ್ದಾರೆ. ಅವರ ಪ್ರಯತ್ನಕ್ಕೆ ಮೆಸ್ಕಾಂ ಅಧಿಕಾರಿಗಳು ಸಾಥ್ ನೀಡಬೇಕೆಂದರು.

ಗ್ಯಾರಂಟಿ ಸಮಿತಿ ಸದಸ್ಯೆ ಸಿಂಥಿಯಾ ಸೆರಾವೊ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂತಿಮ ಮಟ್ಟದ ಪರೀಕ್ಷೆ ಸಮೀಪಿಸುತ್ತಿದೆ. ಈಗಲಾದರೂ ನಿರಂತರ ವಿದ್ಯುತ್ ನೀಡುವಂತೆ ಮೆಸ್ಕಾಂ ಅಧಿಕಾರಿಗಳನ್ನು ಅವರು ಒತ್ತಾಯಿಸಿದರು.

ತಾಲೂಕಿನಲ್ಲಿ ಈವರೆಗೆ ಯುವನಿಧಿ ಯೋಜನೆಗೆ 936 ಅರ್ಜಿ ಸಲ್ಲಿಕೆಯಾಗಿದ್ದು, ಡಿಸೆಂಬರ್ 25 ಅಂತ್ಯಕ್ಕೆ ಕೇವಲ 256 ಫಲಾನುಭವಿಗಳಿಗೆ 7,66,500 ರೂ. ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಯೋಜನೆ ಕುರಿತು ಪ್ರಚಾರದ ಕೊರತೆಯೇ ಫಲಾನುಭವಿಗಳ ಸಂಖ್ಯೆ ಕುಂಠಿತಗೊಳ್ಳಲು ಕಾರಣವೆಂದು ಯುವನಿಧಿ ಅಧಿಕಾರಿ ಸಭೆಗೆ ತಿಳಿಸಿದರು.

ತಾಲ್ಲೂಕಿನ ಒಟ್ಟು 29011 ಪಡಿತರ ಚೀಟಿಯಲ್ಲಿ 28522 ಪಡಿತರ ಚೀಟಿಗಳು ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯಾಗಿದ್ದು 489 ಪಡಿತರ ಚೀಟಿಗಳು ಯೋಜನೆಯ ನೋಂದಣಿಗೆ ಬಾಕಿ ಇದೆ. 2025ರ ಅಕ್ಟೋಬರ್‌ವರೆಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ಒಟ್ಟು 139 ಫಲಾನುಭವಿಗಳ ಎನ್.ಪಿ.ಸಿ.ಐ ಮ್ಯಾಪಿಂಗ್ ಬಾಕಿ ಇದ್ದು, ಇದರಲ್ಲಿ 103 ಜನ ಫಲಾನುಭವಿಗಳು ಲಿಂಕ್ ಮಾಡಲಾಗಿದೆ. 17 ಮರಣ ಹೊಂದಿದ್ದು, 14 ಜನರ ಲಿಂಕ್ ಬಾಕಿ ಇದೆ. ಇದರಲ್ಲಿ ಮೂವರು ಯೋಜನೆ ನಿರಾಕರಣೆ, ತಲಾ ಓರ್ವ ಬೇರೆಡೆ ವಾಸ ಹಾಗು ಬೇರೆ ತಾಲ್ಲೂಕಿನ ಫಲಾನುಭವಿ ಆಗಿದ್ದಾರೆ ಎಂದು ಸಿಡಿಪಿಒ ಗಾಯತ್ರಿ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಅಕ್ಷತಾ ನಾಗರಾಜ್, ಪೂರ್ಣಿಮಾ ಮೂರ್ತಿರಾವ್, ಸುಮಂಗಲ ದೇವರಾಜ್, ಸಂತೋಷ್ ಮಳವಳ್ಳಿ, ಸಿಂಥಿಯಾ ಸೆರಾವೋ, ಅನಿಲ್ ಕುಮಾರ್, ಕರುಣಾಕರ, ಸಮಿತಿಯ ಕಾರ್ಯದರ್ಶಿ ಇಒ ನರೇಂದ್ರ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ರಿಪ್ಪನ್‌ಪೇಟೆಯ ಅಮೀರ್ ಹಮ್ಜಾ, ಮೆಸ್ಕಾಂ ಎಇಇ ಚಂದ್ರಶೇಖರ್, ಆಹಾರ ನಿರೀಕ್ಷಕ ನಾಗರಾಜ್, ಗುಮಾಸ್ತ ಮಂಜುನಾಥ್ ಉಪಸ್ಥಿತರಿದ್ದರು.

Leave a Comment