110 ಕೆ.ವಿ. ವಿದ್ಯುತ್ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಏ.4 ರಂದು ಹೊಸನಗರದಲ್ಲಿ ಪ್ರತಿಭಟನಾ ಪಾದಯಾತ್ರೆ ; ದುಮ್ಮ ವಿನಯ್‌ಕುಮಾರ್

Written by Mahesha Hindlemane

Published on:

ಹೊಸನಗರ ; ರಾಜ್ಯಕ್ಕೆ ಬೆಳಕು ನೀಡಲು ವರಾಹಿ, ಶರಾವತಿ ಮುಳುಗಡೆಯಿಂದ ಬದುಕು ಕಳೆದುಕೊಂಡ ತಾಲೂಕಿನ ಜನತೆಗೆ ಈವರೆಗೂ ಕತ್ತಲಲ್ಲೇ ಕಳೆಯುವಂತಾಗಿದೆ. ತಾಲೂಕು ಕೇಂದ್ರದಲ್ಲಿ ಈವರೆಗೆ 110 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣ ಆಗದಿರುವುದು ಇಲ್ಲಿನ ಜನರ ದೌರ್ಭಾಗ್ಯವಾಗಿದೆ‌. ಹೊಸನಗರ ಪಟ್ಟಣಕ್ಕೆ 110 ವಿದ್ಯುತ್ ಸ್ಥಾವರ ಸ್ಥಾಪಿಸುವವರೆಗೆ ನಿರಂತರ ಹೋರಾಟ ಮುಂದುವರೆಯಲಿದ್ದು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಏಪ್ರಿಲ್ 4ರ ಶನಿವಾರ ಹೊಸನಗರದ ಮಾವಿನಕೊಪ್ಪ ಸರ್ಕಲ್‌ನಿಂದ ತಾಲ್ಲೂಕು ಕಛೇರಿಯವರೆಗೆ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್.ವಿನಯ್‌ಕುಮಾರ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಸಂಘದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಎಷ್ಟೆಲ್ಲಾ ಮುಂದುವರೆದಿದ್ದರೂ, 60 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ 33 ಕೆವಿ ವಿದ್ಯುತ್ ಕೇಂದ್ರವೇ ಹೊಸನಗರದ ಪಾಲಿಗೆ ಉಳಿದಿದೆ. ಅಂದಿದ್ದ ವಿದ್ಯುತ್ ಬೇಡಿಕೆ ನೂರಾರು ಪಟ್ಟು ಹೆಚ್ಚಿದೆ. ವಿದ್ಯುತ್ ಸಂಪರ್ಕಗಳೂ ಹೆಚ್ಚಿವೆ. ಅವಲಂಬನೆಯೂ ಹೆಚ್ಚಿದೆ. ಆದರೆ ವಿತರಣ ಕೇಂದ್ರದ ಸಾಮರ್ಥ್ಯ ಮಾತ್ರ ಹಾಗೇ ಇರುವುದು ವಿಪರ‍್ಯಾಸ. ಆಗ ಒಂದು ಗ್ರಾಮದಲ್ಲಿ ಹತ್ತಾರೂ ಜನ ವಾಸಿಸುತ್ತಿದ್ದರು ಒಂದೆರಡು ಪಂಪ್‌ಸೆಟ್‌ಗಳಿದ್ದವು ಒಂದೇ ಟಿ.ಸಿ ಇತ್ತು ಅಂದು ವಿದ್ಯುತ್ ಸಂಪರ್ಕ ಸಾಕಿತ್ತು ಕಾಲ ಬದಲಾವಣೆಯದಂತೆ ಜನಸಂಖ್ಯೆಯು ಹೆಚ್ಚಿದೆ ಒಂದೆರಡು ಪಂಪ್‌ಸೆಟ್ ಬದಲಾಗಿ ಹತ್ತರೂ ಪಂಪ್‌ಸೆಟ್‌ಗಳು ಬಂದಿದೆ. ಆದರೆ ಟಿ.ಸಿ ಇರುವುದು ಒಂದೇ ನೂರಾರು ಜನರ ಮನೆಗಳಿಗೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಿದರೇ ಒಲ್ಟೇಜ್ ಬರುವುದು ಹೇಗೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಗಂಜಿ ಕೇಂದ್ರ ತೆರೆಯುತ್ತೇವೆ ;

ಶನಿವಾರ ಪ್ರತಿಭಟನೆ ಹಾಗೂ ಪಾದಯಾತ್ರೆ ಮುಗಿದ ತಕ್ಷಣ ಗಂಜಿ ಕೇಂದ್ರ ತೆರೆಯುತ್ತೇವೆ. ಸರ್ಕಾರಕ್ಕೆ ಶಾಸಕರುಗಳಿಗೆ ಹಾಗೂ ಅಧಿಕಾರಿಗಳಿಗೆ 110ಕೆ.ವಿ ಸ್ಥಾಪಿಸಲು ಒಂದು ತಿಂಗಳು ಕಾಲಾವಕಾಶ ನೀಡುತ್ತೇವೆ. ಒಂದು ತಿಂಗಳಲ್ಲಿ ಹೊಸನಗರ ಪಟ್ಟಣಕ್ಕೆ 110 ಕೆ.ವಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೊಸನಗರ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಗ್ರಾಮಸ್ಥರು ಗಂಜಿ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಾರೆ. 110 ಕೆ.ವಿ ಸ್ಥಾವರ ನಿರ್ಮಾಣವಾಗುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆಂದು ದುಮ್ಮ ವಿನಯ್‌ಕುಮಾರ್ ತಿಳಿಸಿದರು.

ಜನಹಿತರಂಗದ ಸಂಚಾಲಕ ವಾಟಗೋಡು ಸುರೇಶ್ ಮಾತನಾಡಿ, ಹರಿದ್ರಾವತಿಯಲ್ಲಿ 33 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 7 ವರ್ಷ ಹೋರಾಟ ನಡೆಸಲಾಗಿತ್ತು. ಆದರೆ ಹೊಸನಗರಕ್ಕೆ ಅದಕ್ಕಿಂತಲೂ ಹಿಂದಿನಿಂದಲೂ ಬೇಡಿಕೆ ಇಟ್ಟಿದ್ದ 110 ಕೆವಿ ಸ್ಥಾವರ ಮಾತ್ರ ಈವರೆಗೂ ಆಗಲಿಲ್ಲ. ಜನಸಾಮಾನ್ಯರು, ರೈತರು, ವರ್ತಕರು, ಉದ್ಯಮಿಗಳು, ಗೃಹಿಣಿಯರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ 110 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಆಗ್ರಹಿಸಿ ಏ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಾವಿನಕೊಪ್ಪದಿಂದ ತಾಲೂಕು ಕಛೇರಿವರೆಗೆ ಮೌನ ಮೆರವಣಿಗೆ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜನಹಿತ ಸಂಘದ ಸಂಚಾಲಕ ವಾಟಗೋಡು ಸುರೇಶ್, ಗುಬ್ಬಿಗಾ ಜಿ.ಎಸ್.ರವಿ, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್‌ಕುಮಾರ್ ಮತ್ತಿತರರು ಇದ್ದರು.

Leave a Comment