CHIKKAMAGALURU ; ಅಜ್ಜ-ಅಜ್ಜಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಬೆಂಗಳೂರಿನ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳೊಳಗೆ ಮಲ್ಲಂದೂರು ಪೊಲೀಸರು ಬಂಧಿಸುವಲ್ಲಿ ಸಫಲಾಗಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಕೊಲೆ ಮಾಡಿರುವುದಾಗಿ ಅಜ್ಜ ಅಜ್ಜಿಯ ಮೊಮ್ಮಗ ಆರೋಪಿ ನಿಶಾಂತ್ ಪೊಲೀಸರ ಎದುರು ಬಾಯ್ಬಿಟ್ಟಿರುವುದಾಗಿ ಹೇಳಲಾಗುತ್ತಿದೆ.
ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪಾಪಿ ಮೊಮ್ಮಗನನ್ನು ಮಲ್ಲಂದೂರು ಪಿಎಸ್ಐ ಗುರು ಸಜ್ಜನ್ ನೇತೃತ್ವದ ತಂಡ ಬಂಧಿಸಿ ಕರೆ ತಂದಿತ್ತು. ಆದರೆ ಕೊಲೆಗೆ ಕಾರಣ ಮಾತ್ರ ಬೇರೆಯೇ ಹೇಳುತ್ತಿದ್ದ. ನಂತರ ಆರೋಪಿಯನ್ನು ವಿಚಾರಣೆ ನಡೆಸಿದ ಆಲ್ದೂರು ವೃತ್ತ ನಿರೀಕ್ಷಕರಾದ ಪಿ.ಪಿ ಸೋಮೇಗೌಡರು ನಿಜವಾದ ಕಾರಣವನ್ನು ಬಾಯ್ಬಿಡಿಸಿದ್ದಾರೆ.
ಮೊದಲು ಹೇಳಿದ್ದು ಸುಳ್ಳು ಎಂದು ನಂತರ ಸತ್ಯ ಹೇಳಿದ್ದಾನೆ. ಕೊಲೆ ಮಾಡಿ ಬೆಂಗಳೂರಿನ ಗಲ್ಲಿಯೊಂದರಲ್ಲಿನ ಸ್ನೇಹಿತನ ಮನೆಯಲ್ಲಿ ಮಲಗಿದ್ದ ಆರೋಪಿಯನ್ನು ಬಂಧಿಸಿದ್ದು, ಕೃತ್ಯ ನಡೆದ ನಂತರ ಪರಾರಿಯಾಗಲು ಬಳಸಿದ ಕೆಎ-02 ಕೆಪಿ- 4270 ಎನ್ ಟಾರ್ಕ್ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡು, ಆರೋಪಿಯು ಬಸಪ್ಪ (65) ಹಾಗೂ ಲಲಿತಮ್ಮ (58) ರವರನ್ನು ಕೊಲೆ ಮಾಡಲು ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಕೃತ್ಯ ನಡೆದ ಕೇವಲ 48 ಗಂಟೆಗಳೊಳಗಾಗಿ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಕೃತ್ಯ ನಡೆದ ಕೇವಲ 48 ಗಂಟೆ ಒಳಗಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸಲು ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಾದ ದೇವರಾಜ್, ಅಶೋಕ್, ಭರತ್ ಭೂಷಣ್, ಅಭಿಷೇಕ್, ಶರತ್, ಚಿದಾನಂದ, ನವೀನ್ ಕುಮಾರ್, ಮಂಜುನಾಥ್, ಹರ್ಷ, ಶಾಂತರಾಜು, ಚಾಲಕರಾದ ರಾಜಯ್ಯ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಬ್ಬಾನಿರವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಂ ಆಮಟೆ ಶ್ಲಾಘಿಸಿದ್ದಾರೆ.
ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಾಮೆ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿತ್ತು.