HOSANAGARA ; ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರದ ಹಣ ವ್ಯಯ ಮಾಡಿ ಮಾಸ್ತಿಕಟ್ಟೆಯ ಮಧ್ಯ ಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದ್ದು ಈ ಕಟ್ಟಡ ಸರಿಯಾಗಿ ಕಾಮಗಾರಿ ನಡೆಸದೇ ಉದ್ಘಾಟನೆ ಕಾಣದೇ ಹೊಸ ಅಂಬೇಡ್ಕರ್ ಭವನ ಈಗ ಹಳೆಯ ಭವನವಾಗಿದ್ದು ಇದರ ಉದ್ಘಾಟನೆ ಯಾವಾಗ? ಎಂದು ಹೊಸನಗರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ವಿ ರವೀಂದ್ರ ಸರ್ಕಾರಕ್ಕೆ ಹಾಗೂ ಆಡಳಿತ ಮಂಡಳಿಗೆ ಪ್ರಶ್ನಿಸಿದ್ದಾರೆ.
ಈ ಅಂಬೇಡ್ಕರ್ ನಿರ್ಮಿಸುವಾಗ ಯಾವುದೇ ಕ್ರಮ ಕೈಗೊಳ್ಳದೇ ನಿರ್ಮಿಸಲಾಗಿದ್ದು ಈ ಭವನಕ್ಕೆ ಹೋಗಲು ಯಾವುದೇ ದಾರಿಯಿಲ್ಲ. ಅಂಬೇಡ್ಕರ್ ಭವನ ನಿರ್ಮಿಸುವಾಗ ಭವನದ ಕಿಟಕಿ, ಬಾಗಿಲು ಸರಿಯಾದ ರೀತಿಯಲ್ಲಿ ಅಳವಡಿಸದೇ ಇರುವುದು ವಿದ್ಯುತ್ ಸೌಲಭ್ಯ ಪಡೆಯದೇ ಇರುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗಾಗ ದೂರವಾಣಿ ಮೂಲಕ ಈ ಭವನದ ಬಗ್ಗೆ ತಿಳಿಸುತ್ತಿದ್ದರೂ ಇಲ್ಲಿಯವರೆಗೂ ಗಮನ ಹರಿಸದೇ ಇರುವುದು ಏಕೆ? ಎಂಬ ಪ್ರಶ್ನೆ ಉದ್ಭವವಾಗಿದೆ.
ಅಂಬೇಡ್ಕರ್ ಭವನ ನಿರ್ಮಿಸಿದ ಮೇಲೆ ಆ ಭವನವನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ನೀಡಬೇಕಾಗಿತ್ತು ಆದರೆ ಇಲ್ಲಿಯವರೆಗೂ ಗ್ರಾಮ ಪಂಚಾಯಿತಿಗೆ ನೀಡಿಲ್ಲ. ಮುಂದಿನ ದಿನದಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿ ಅಧೀನಕ್ಕೆ ನೀಡದಿದ್ದರೆ ಹೊಸನಗರ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.