THARIKERE ; ಹಸೆಮಣೆ ಏರಿ ಕೇವಲ 33 ದಿನಕ್ಕೆ ನವವಧು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಬಿಂದು (21) ಹೊಟ್ಟೆ ನೋವು ತಾಳಲಾರದೆ ಮನೆಯಲ್ಲೇ ನೇಣುಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆಗೆ ಶರಣಾದ ಮಹಿಳೆ.
ಮೃತ ಬಿಂದು ಕಳೆದ ನವೆಂಬರ್ 24ರಂದು ಮದುವೆಯಾಗಿದ್ದಳು. ಮದುವೆಯಾಗಿ ಕೇವಲ ಒಂದು ತಿಂಗಳು ಮೂರು ದಿನವಾಗಿದೆ ಅಷ್ಟೆ. ಮೂಲತಃ ತರೀಕೆರೆ ತಾಲೂಕಿನ ಗುಳ್ಳದಮನೆ ನಿವಾಸಿ ಬಿಂದುಳನ್ನ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಂತೇನಹಳ್ಳಿ ಮೂಲಕ ಪ್ರಸನ್ನಕುಮಾರ್ ಎಂಬುವರಿಗೆ ಮದುವೆ ಮಾಡಲಾಗಿತ್ತು.
ಮೃತ ಬಿಂದು ಮದುವೆಯನ್ನೂ ಖುಷಿಯಿಂದಲೇ ಆಗಿದ್ದಳು. ಕಳೆದ ಮೂರು ದಿನದ ಹಿಂದೆ ಗಂಡನ ಜೊತೆ ತವರು ಮನೆಗೆ ಬಂದಿದ್ದಳು. ಮೂರು ದಿನದಿಂದ ದೇವಸ್ಥಾನಗಳಿಗೆ ಹೋಗುತ್ತಿದ್ದ ದಂಪತಿಗಳು ಮನೆಯಲ್ಲಿನ ಪೂಜೆಯಲ್ಲೂ ಪಾಲ್ಗೊಂಡಿದ್ದರು. ಶುಕ್ರವಾರ ತೀವ್ರ ಹೊಟ್ಟೆನೋವು ತಾಳಲಾರದೆ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತ ಬಿಂದುವಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹೊಟ್ಟೆನೋವು ಇತ್ತು. ಅದು ಪಿರಿಯಡ್ಸ್ ಟೈಂನಲ್ಲಿ ತೀವ್ರ ಹೆಚ್ಚಾಗುತ್ತಿತ್ತು. ಈ ಬಗ್ಗೆ ಕುಟುಂಬಸ್ಥರು ಆಸ್ಪತ್ರೆಗೂ ತೋರಿಸಿದ್ದರು. ಆದರೆ, ನೋವು ಕಡಿಮೆಯಾಗಿರಲಿಲ್ಲ. ಹೊಟ್ಟೆನೋವು ಹೆಚ್ಚಿದ್ದ ಕಾರಣ ತಾಳಲಾರದೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಿಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತರೀಕೆರೆ ತಹಶೀಲ್ದಾರ್ ಭೇಟಿ ನೀಡಿ ಶವಪರೀಕ್ಷೆ ನಡೆಸಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.