ಹೊಸನಗರ ; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿ ನಡೆದ ಒಂದು ಘಟನೆಗೆ ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಗಾಂಧಿ ಮಧ್ಯ ಪ್ರವೇಶಿಸಿ ಕ್ರೂರ ಸ್ವಭಾವದ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಿಸುವಂತೆ ಮಾಡಿರುವ ಘಟನೆ ನಡೆದಿದೆ.
ಹೌದು, ಕೆಂಚನಾಲ ರೈಲ್ವೇ ನಿಲ್ದಾಣದ ಬಳಿಯಲ್ಲಿ ಬೀದಿ ನಾಯಿಯನ್ನು ಅಮಾನುಷವಾಗಿ ಹೊಡೆದು ಸಾಯಿಸಿ ಆಟೋದಲ್ಲಿ ಎಳೆದುಕೊಂಡು ಹೋದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೆಂಚನಾಲ ಗ್ರಾಮದ ಆಟೋ ಚಾಲಕ ವಾಜೀದ್ ಎಂದು ಗುರುತಿಸಲಾಗಿದೆ.
ಕೆಂಚನಾಲ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅದರಷ್ಟಕ್ಕೆ ಮಲಗಿದ್ದ ನಾಯಿಯ ಮೇಲೆ ಆರೋಪಿ ವಾಜೀದ್ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕುತ್ತಾನೆ ಆಗ ನಾಯಿ ಕಿರುಚುತ್ತಾ ಅಲ್ಲೇ ಕುಸಿದು ಬೀಳುತ್ತದೆ ಅಷ್ಟಕ್ಕೇ ಸುಮ್ಮನಾಗದ ಆರೋಪಿ ಮತ್ತೊಮ್ಮೆ ಅದೇ ಕಲ್ಲನ್ನು ಎತ್ತಿ ತಲೆ ಮೇಲೆ ಹಾಕಿದ್ದಾನೆ ಇದರಿಂದ ಅರ್ಧ ಜೀವವಾದ ನಾಯಿ ಅಲ್ಲೇ ನರಳಾಡುತ್ತಿರುತ್ತದೆ ಅಲ್ಲಿಂದ ಸ್ವಲ್ಪ ದೂರಕ್ಕೆ ಹೋದ ಆರೋಪಿ ಮತ್ತೊಮ್ಮೆ ಹಿಂದಿರುಗಿ ಬಂದು ಇನ್ನಷ್ಟೂ ಕ್ರೂರವಾಗಿ ಅದೇ ಕಲ್ಲನ್ನು ಮತ್ತೇ ನಾಯಿಯ ತಲೆ ಮೇಲೆ ಹಾಕಿದ ರಭಸಕ್ಕೆ ನಾಯಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಕೊನೆಗೆ ಆ ನಾಯಿಯನ್ನು ತನ್ನ ಆಟೋ ಹಿಂಬದಿಗೆ ಕಟ್ಟಿ ರಸ್ತೆಯ ಮೇಲೆ ಅತೀ ಅಮಾನುಷವಾಗಿ ಎಳೆದೊಯ್ದಿದ್ದಾನೆ.
ಈ ಘಟನೆ ನಡೆಯುವಾಗ ಅಲ್ಲಿದ್ದ ಸ್ಥಳೀಯ ಯುವಕನೊಬ್ಬ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಈ ಬಗ್ಗೆ ರಫ಼ಿ ರಿಪ್ಪನ್‌ಪೇಟೆ ಗಮನಕ್ಕೆ ತಂದಿದ್ದಾರೆ. ಇಂತಹ ಸೂಕ್ಷ್ಮ ವಿಚಾರವನ್ನು ಗಮನಿಸಿದ ಅವರು ಸಂಬಂಧಿಸಿದ ವಿಡಿಯೋ ಹಾಗೂ ಮಾಹಿತಿಯನ್ನು ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಸಂಜಯ್ ಗಾಂಧಿ ಹಾಗೂ ಪ್ರಾಣಿ ದಯಾ ಸಂಘದವರ ಇ-ಮೇಲ್ ಐಡಿಗೆ ಯುವಕನ ಮೊಬೈಲ್ ನಿಂದಲೇ ಸಂದೇಶ ಕಳುಹಿಸಿ ಕ್ರಮ ಕೈಗೊಳ್ಳುವ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಸಂದೇಶ ಕಳುಹಿಸಿ ಕೇವಲ 45 ನಿಮಿಷಗಳಲ್ಲಿ ಇ-ಮೇಲ್ ನಲ್ಲಿ ಸ್ಪಂದಿಸಿದ ಮಾಜಿ ಸಚಿವೆ ಮೇನಕಾ ಗಾಂಧಿ ಯುವಕನಿಗೆ ಕೂಡಲೇ ಸ್ಥಳೀಯ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಹಾಗೂ ಈ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಹಾಗೂ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ರವರಿಗೆ ಮಾಹಿತಿ ತಿಳಿಸಿದ್ದೇನೆ ಎಂದು ಹೆಚ್ಚಿನ ಮಾಹಿತಿ ತನಗೆ ಕರೆ ಮಾಡುವಂತೆ ಮೊಬೈಲ್ ನಂಬರ್ ಕಳುಹಿಸಿದ್ದಾರೆ.
ಮೇನಕಾ ಗಾಂಧಿರವರ ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಪ್ರಾಣಿ ದಯಾ ಸಂಘದವರು ಈ ಬಗ್ಗೆ ಪಶು ವೈದ್ಯಾಧಿಕಾರಿ ಕಡೆಯಿಂದ ಪಟ್ಟಣದ ಠಾಣೆಗೆ ದೂರು ದಾಖಲಿಸಿದ್ದಾರೆ.
ದೂರು ಸಲ್ಲಿಕೆಯಾಗಿ 15 ನಿಮಿಷಗಳಲ್ಲಿ ಆರೋಪಿ ಆಟೋ ಚಾಲಕ ವಾಜೀದ್ ನನ್ನು ಪಿಎಸ್‌ಐ ಪ್ರವೀಣ್ ಎಸ್ ಪಿ ನೇತೃತ್ವದ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ಮನೆಯಲ್ಲಿ ಸಾಕಿದ್ದ ಕೋಳಿಗಳನ್ನು ನಾಯಿ ತಿನ್ನುತ್ತಿದ್ದರಿಂದ ಕುಪಿತಗೊಂಡು ಹೀಗೆ ಮಾಡಿದ್ದಾನೆ ಎಂದು ಆರೋಪಿಯ ಕುಟುಂಬಸ್ಥರು ಹೇಳುತ್ಕಿದ್ದಾರೆ ಆದರೆ ಕೋಳಿಗಾಗಿ ಬೀದಿ ನಾಯಿಯನ್ನು ಇಷ್ಟೊಂದು ಕ್ರೂರವಾಗಿ ಸಾಯಿಸುವ ಅನಿವಾರ್ಯತೆ ಇತ್ತಾ ಎಂಬುವುದೇ ಸಾರ್ವಜನಿಕ ಪ್ರಶ್ನೆಯಾಗಿದೆ.
ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತಾ (BNS), 2023 ರ ಸೆಕ್ಷನ್ 325 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (PCA) ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಾಗಿದೆ.