ಹೊಸನಗರ ; ಹೆಬ್ಬಂಡೆಯನ್ನೇ ಆಲಯವನ್ನಾಗಿ ಮಾಡಿಕೊಂಡು ನೆಲೆಸಿರುವ ತಾಲೂಕಿನ ಕೋಡೂರು ಸಮೀಪದ ಅಮ್ಮನಘಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಂಕಣ ಕಟ್ಟುವ ಮೂಲಕ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು.
ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದ ಈಡಿಗ (ದೀವರು) ಸಮುದಾಯದ ಆರಾಧ್ಯ ದೈವವಾದ ಶ್ರೀ ಜೇನುಕಲ್ಲಮ್ಮ ದೇವಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಕಲಗೋಡು ರತ್ನಾಕರ ನೇತೃತ್ವದಲ್ಲಿ ನೂರಾರು ಭಕ್ತರು ದೇವಿಯ ಮೂಲ ಸ್ಥಳಕ್ಕೆ (ಹಳೇ ಅಮ್ಮನಘಟ್ಟ) ಶನಿವಾರ ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯ ನಡೆದಿತ್ತು.
ಇತ್ತೀಚೆಗಷ್ಟೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನೂತನ ಶಿಲಾಮಯ ದೇಗುಲ ಲೋಕಾರ್ಪಣೆಗೊಂಡಿದೆ.
ಇದೇ ಸೆಪ್ಟೆಂಬರ್ 9ರ ಮಂಗಳವಾರದಿಂದ ಸೆ. 19ರ ಶುಕ್ರವಾರದವರೆಗೆ ಪ್ರತಿ ಮಂಗಳವಾರ ಹಾಗು ಶುಕ್ರವಾರ ದೇವಿಯ ಜಾತ್ರೆ ನಡೆಯಲಿದೆ. ನವರಾತ್ರಿಯಲ್ಲಿ ದೇವಿಗೆ ವಿಶೇಷ ಅಲಂಕಾರ, ಚಂಡಿಕಾಹೋಮ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ.
ಪ್ರತಿ ಜಾತ್ರೆ ದಿನದಂದು ಸಾವಿರಾರು ಭಕ್ತರು ತಾವು ಬೆಳೆದ ಬೆಳೆಯ ಮೊದಲ ಫಸಲು, ಬೆಣ್ಣೆ ಸೇರಿದಂತೆ ವಿಶಿಷ್ಟ ಖಾದ್ಯಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ನವ ದಂಪತಿಗಳು, ಮಕ್ಕಳಾಗದವರು, ಚರ್ಮ ವ್ಯಾಧಿ ಸೇರಿದಂತೆ ವಿವಿಧ ತರಹದ ರೋಗ ರುಜಿನಗಳಿಂದ ಬಳಲುತ್ತಿರುವರು ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮುಡುಪು ಕಾಣಿಕೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಕ್ಷೇತ್ರದ ಮಹಿಮೆಗೆ ಕಳಸಪ್ರಾಯವಿದ್ದಂತೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.