ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ ; ರಂಭಾಪುರಿ ಶ್ರೀಗಳು

0 275

ಬೆಂಗಳೂರು : ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮಾಚರಣೆ ಮುಖ್ಯ. ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ ಮತ್ತು ಬಲ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ಚಿಕ್ಕಪೇಟೆ ಶ್ರೀ ಮಹಂತಿನ ಮಠದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಜಗದಗಲ ತುಂಬಿದ ಪರಮಾತ್ಮನನ್ನು ವೀರಶೈವರು ಇಷ್ಟಲಿಂಗ ರೂಪದಿಂದ ಪೂಜಿಸುತ್ತಾರೆ. ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಫಲ ಪ್ರಾಪ್ತವಾಗುತ್ತದೆ. ಬ್ರಹ್ಮ ವಿಷ್ಣು ಮೊದಲ್ಗೊಂಡು ಸಕಲ ದೇವಾನುದೇವತೆಗಳು ಶಿವನನ್ನು ಪೂಜಿಸಿದ್ದಾರೆ. ಸೂರ್ಯಕಾಂತ ಶಿಲೆಯಲ್ಲಿ ಬೆಂಕಿ ಚಂದ್ರಕಾಂತ ಶಿಲೆಯಲ್ಲಿ ನೀರು ಬೀಜದಲ್ಲಿ ಅಂಕುರ ಇರುವಂತೆ ಪ್ರತಿಯೊಬ್ಬರಲ್ಲೂ ಪರಮಾತ್ಮ ನೆಲೆಸಿದ್ದಾನೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು. ಪರಶಿವನ ಸಾಕಾರ ರೂಪ ಗುರು. ಶಿವಪಥವನ್ನರಿಯಲು ಗುರುವಿನ ಬೋಧಾಮೃತ ಅವಶ್ಯಕ ಎಂಬುದನ್ನು ಮರೆಯುವಂತಿಲ್ಲ. ದುಃಖ ತ್ರಯಗಳಿಂದ ದೂರವಾಗಲು ಶಿವಜ್ಞಾನದ ಅರಿವು ಧ್ಯಾನ ಮುಖ್ಯ. ಮನುಷ್ಯನ ಅನಿಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ಕೊಡುವ ಶಕ್ತಿ ಇಷ್ಟಲಿಂಗದಲ್ಲಿ ಇದೆ. ಹೆಸರಿನಿಂದ ವೀರಶೈವನಾಗದೇ ಆಚರಣೆಯಿಂದ ವೀರಶೈವರಾಗಿ ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.

ಸಮಾರಂಭದ ನೇತೃತ್ವ ವಹಿಸಿದ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನದ ಶಾಂತಿಗೆ ನೆಮ್ಮದಿಯ ಬದುಕಿಗೆ ಧರ್ಮ ಪಾಲನೆ ಅವಶ್ಯಕ ಎಂದರು. ಪೂಜಾ ಧರ್ಮ ಸಮಾರಂಭದಲ್ಲಿ ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು, ಅಕ್ಕಿಆಲೂರು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಹೆಡಿಗಿ ಮುದ್ರಾ ಶಾಂತಮಲ್ಲಿಕಾರ್ಜುನ ಶಿವಾಚಾರ್ಯ ಸಾಮಿಗಳು ಪಾಲ್ಗೊಂಡಿದ್ದರು. ಆಗಮಿಸಿದ ಸಹಸ್ರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪುನೀತರಾದರು. ಹಾಲ್ಜೇನು ವೀರಭದ್ರಯ್ಯ ನಿರೂಪಿಸಿದರು.

Leave A Reply

Your email address will not be published.

error: Content is protected !!