HOSANAGARA | ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಕುರಿತು ರಾಜಕೀಯ ವಿರೋಧಿಗಳು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅವರು ವಿದೇಶಕ್ಕೆ ತೆರಳಿರುವುದು ಮೋಜು ಮಸ್ತಿಗಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಕುಟುಂಬ ಸಮೇತ ವಿದೇಶದಲ್ಲಿರುವ ತಮ್ಮ ಪುತ್ರಿ ಮನೆಗೆ ತೆರಳಿದ್ದಾರೆ. ಇದು ಪೂರ್ವ ನಿಯೋಜಿತ ಪ್ರವಾಸವಾಗಿದ್ದು, ವಿಧಾನಸಭಾಧ್ಯಕ್ಷರಿಂದ ಅನುಮತಿ ಪಡೆದಿದ್ದಾರೆ. ಆದರೆ ಕ್ಷೇತ್ರದ ಜನರ ಸಂಕಷ್ಟದ ಸಮಯದಲ್ಲಿ ಶಾಸಕರು ಮೋಜು ಮಸ್ತಿಗೆ ವಿದೇಶಕ್ಕೆ ತೆರಳಿದ್ದಾರೆ ಎಂದು ರಾಜಕೀಯ ವಿರೋಧಿಗಳು ಅಪಪ್ರಚಾರ ಕೈಗೊಂಡಿದ್ದಾರೆ. ಶಾಸಕರ ಅನುಪಸ್ಥಿತಿಯ ಕೊರತೆ ಉಂಟಾಗದಂತೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅತಿವೃಷ್ಠಿಯಿಂದ ಹಾನಿಯಾಗಿರುವ ಕ್ಷೇತ್ರಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಸಹಾಯ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಶಾಸಕರು ವಿದೇಶದಿಂದಲೇ ವಿಡಿಯೋಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದ್ದಾರೆ. ಹಾನಿಯ ವಿವರ ಪಡೆದು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನ ನೀಡುತ್ತಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ಅಧಿಕಾರಿಗಳ ಸಭೆ ನಡೆಸಿ ಪ್ರಗತಿಪರಿಶೀಲನೆ ನಡೆಸಿದ್ದಾರೆ ಎಂದರು.
ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಆಗಿರುವ ಹಾನಿಯ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಸಂತ್ರಸ್ಥರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಪಕ್ಷದ ಕಾರ್ಯಕರ್ತರು ಸಹಾ ಜನಪರ ಕಾಳಜಿಯಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ 18 ಕೋಟಿ. ರೂ. ಹಾಗೂ ಕೆರೆ ಅಭಿವೃದ್ಧಿಗಾಗಿ 11 ಕೋಟಿ ರೂ. ಕಾಮಗಾರಿಗಳು ಅನಮೋದನೆಗೊಂಡಿವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಮಳೆಗಾಲದ ಬಳಿಕ ಕಾಮಗಾರಿಗಳು ಆರಂಭಗೊಳ್ಳಲಿವೆ. ಬೇಳೂರು ಗೋಪಾಲಕೃಷ್ಣರವರು ಮುಂದಿನ ದಿನದಲ್ಲಿ ಅಭಿವೃದ್ಧಿಯ ಮೂಲಕ ವಿರೋಧಿಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಶಾಸಕರಿಂದ ದೂರ ಉಳಿದಿಲ್ಲ :
ಲೋಕಸಭೆಯ ಚುನಾವಣೆ ಈಗಾಗಲೇ ಮುಗಿದಿದೆ. ಹೊಸನಗರ ತಾಲ್ಲೂಕಿನ ಎಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಸಕರೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಒಂದು ಕುಟುಂಬದಲ್ಲಿ ಸಣ್ಣ-ಪುಟ್ಟ ಮನಸ್ತಾಪಗಳು ಇರುವುದು ಸಹಜ. ಮುಂದಿನ ದಿನದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ತಾಲ್ಲೂಕು ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಮಾತನಾಡಿ, ತಾಲೂಕಿನ ನಗರ ಮತ್ತು ಹುಂಚ ಹೋಬಳಿಯಲ್ಲಿ ಅತಿವೃಷ್ಠಿಯಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಮನೆಗಳು, ಗದ್ದೆಗಳು, ತೋಟಗಳು ಅತಿವೃಷ್ಠಿಯಿಂದ ಹಾಳಾಗಿ ಹೋಗಿದೆ. ಆದರೆ, ತೀರ್ಥಹಳ್ಳಿ ಶಾಸಕರು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಜನರು ಅನಾಥಭಾವ ಅನುಭವಿಸುವಂತಾಗಿದೆ. ಸಾಗರ ಕ್ಷೇತ್ರದ ಶಾಸಕರನ್ನು ವಿರೋಧಿಸುವ ಮುನ್ನ ಬಿಜೆಪಿ ಶಾಸಕರ ಕಾರ್ಯವೈಖರಿಯನ್ನು ಗಮನಿಸಲಿ ಎಂದರು.
ಪತ್ರಿಕಾಘೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಪ್ರಭಾಕರ, ಆಶ್ರಯ ಸಮಿತಿಯ ಮಾಜಿ ಅಧ್ಯಕ್ಷ ಹೆಚ್.ಶ್ರೀನಿವಾಸ ಕಾಮತ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಮಾಸ್ತಿಕಟ್ಟೆ ಸುಬ್ರಮಣ್ಯ, ಟೌನ್ ಘಟಕದ ಅಧ್ಯಕ್ಷ ಗುರುರಾಜ ಆರ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಎಚ್.ಬಿ.ಚಿದಂಬರ, ಎಂ.ಪಿ ಸುರೇಶ್, ಕರುಣಾಕರ ಶೆಟ್ಟಿ, ಜಯನಗರ ಗುರು, ಚೇತನದಾಸ್, ಉಬೇದುಲ್ಲಾ ಮತ್ತಿತರರು ಇದ್ದರು.