ಭದ್ರಾವತಿ:ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ಕ್ರೂರ ಹತ್ಯೆ ಪ್ರಕರಣದಲ್ಲಿ ಘನ ನ್ಯಾಯಾಲಯವು ಆರೋಪಿಗಳಿಗೆ ತೀರ್ಪು ನೀಡಿದ್ದು, ಮುಖ್ಯ ಆರೋಪಿ ಪತ್ನಿಗೆ ಮರಣದಂಡನೆ ವಿಧಿಸಿದೆ.
ಘಟನೆ ವಿವರ:
ಭದ್ರಾವತಿ ಅಂತರಗಂಗೆಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಲಕ್ಷ್ಮೀ, ಗುಲ್ಬರ್ಗದಲ್ಲಿ ಕೆಲಸ ಮಾಡುತ್ತಿದ್ದ ಸೊರಬದ ಶಿಕ್ಷಕ ಇಮ್ತಿಯಾಜ್ ಅವರನ್ನು ಪ್ರೀತಿಸಿ, ಬಳಿಕ ರಿಜಿಸ್ಟರ್ ಮದುವೆಯಾಗಿದ್ದರು.ಮದುವೆಯ ನಂತರ ಇಮ್ತಿಯಾಜ್, ಸೊರಬ ತಾಲೂಕಿನ ತೆಲಗುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಲಕ್ಷ್ಮೀ, ಭದ್ರಾವತಿ ಅಂತರಗಂಗೆಯ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಕಾರಣ, ಅವರು ಭದ್ರಾವತಿ ಜನ್ನಾಪುರ ಎನ್ಟಿಬಿ ಕಚೇರಿ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದು, ಇಮ್ತಿಯಾಜ್ ಆಗಾಗ ಸೊರಬದಿಂದ ಇಲ್ಲಿ ಬಂದು ಹೋಗುತ್ತಿದ್ದರು.
ಲಕ್ಷ್ಮಿ ಮನೆಯ ಪಕ್ಕದಲ್ಲೇ ಅವಳ ಬಾಲ್ಯದ ಗೆಳೆಯ ಕೃಷ್ಣಮೂರ್ತಿ ಮನೆ ಮಾಡಿದ್ದನು.ಇದರಿಂದಾಗಿ ಇಬ್ಬರ ನಡುವೆ ಆಪ್ತ ಸಂಬಂಧ ಬೆಳೆದಿತ್ತು . ಪತ್ನಿ ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ನಡುವಿನ ಅತಿಯಾದ ಒಡನಾಟದ ಬಗ್ಗೆ ಇಮ್ತಿಯಾಜ್ ಹಲವು ಬಾರಿ ಎಚ್ಚರಿಕೆ ನೀಡಿದ್ದನು. ಇಮ್ತಿಯಾಜ್ ಮನೆಯವರೂ ಸಹ ಲಕ್ಷ್ಮೀಗೆ ಬುದ್ಧಿವಾದ ಹೇಳಿದ್ದರು.
ಆದರೆ ಪರಿಸ್ಥಿತಿ ಬದಲಾಗದೆ, 2016ರ ಜುಲೈ 7ರ ರಾತ್ರಿ ಸುಮಾರು 7:30ಕ್ಕೆ ಲಕ್ಷ್ಮೀ ಹಾಗೂ ಇಮ್ತಿಯಾಜ್ ನಡುವೆ ತೀವ್ರ ಜಗಳ ಏರ್ಪಟ್ಟಿತು. ಜಗಳದ ಹೊತ್ತಿನಲ್ಲಿ ಲಕ್ಷ್ಮೀ ತನ್ನ ಸ್ನೇಹಿತ ಕೃಷ್ಣಮೂರ್ತಿಯ ಸಹಕಾರದಿಂದ ಇಮ್ತಿಯಾಜ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದರು. ನಂತರ ಮತ್ತೋರ್ವ ಶಿವರಾಜ್ ಸಹಾಯದಿಂದ ಮೃತದೇಹವನ್ನು ಭದ್ರಾ ನದಿಗೆ ಎಸೆದಿದ್ದರು.
ಈ ಘಟನೆ ಬಳಿಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 302, 201, 34 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು (ಗುನ್ನೆ ಸಂಖ್ಯೆ 0099/2016).
ತನಿಖೆ ಮತ್ತು ದೋಷಾರೋಪಣೆ:
ಘಟನೆಯ ತನಿಖೆಯನ್ನು ಆಗಿನ ಸಿ.ಪಿ.ಐ. ಪ್ರಭು ಬಿ. ಸೂರಿನ್ ಹಾಗೂ ಸಿ.ಪಿ.ಐ. ಚಂದ್ರಶೇಖರ್ ಟಿ.ಕೆ. ಭದ್ರಾವತಿ ನಗರ ವೃತ್ತ ಅವರು ಕೈಗೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು:
ಪ್ರಕರಣದ ವಿಚಾರಣೆ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ವಾದ ಮಂಡಿಸಿದರು. ಆರೋಪದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶೆ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್ ಅವರು ಇಂದು (ಆ.23) ತೀರ್ಪು ನೀಡಿದರು.
ತೀರ್ಪಿನ ಪ್ರಕಾರ,
- ಆರೋಪಿ ಲಕ್ಷ್ಮಿ (29 ವರ್ಷ) ಹಾಗೂ ಕೃಷ್ಣಮೂರ್ತಿ (30 ವರ್ಷ) – ಇವರಿಗೆ ಮರಣದಂಡನೆ
- ಆರೋಪಿ ಶಿವರಾಜು (32 ವರ್ಷ) – 7 ವರ್ಷದ ಶಿಕ್ಷೆ
ತೀರ್ಪು ಪ್ರಕಟಿಸಿರುವ ತಾಲೂಕು ನ್ಯಾಯಾಲಯವು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದು, ಜೊತೆಗೆ ₹13 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ.
ತೀರ್ಪಿನ ಪ್ರಕಾರ, ಈ ಮೊತ್ತದಲ್ಲಿ ₹10 ಲಕ್ಷವನ್ನು ಮೃತ ಇಮ್ತಿಯಾಜ್ ಅವರ ತಾಯಿಗೆ ಪರಿಹಾರವಾಗಿ ನೀಡಬೇಕು ಮತ್ತು ಉಳಿದ ₹3 ಲಕ್ಷವನ್ನು ದಂಡವಾಗಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಹೇಳಲಾಗಿದೆ.
ತಾಲೂಕು ಮಟ್ಟದ ನ್ಯಾಯಾಲಯದಲ್ಲಿ ಮರಣ ದಂಡನೆಯಂತಹ ಗೋರ ಶಿಕ್ಷೆ ಹೊರಬಿದ್ದಿರುವುದು ಇದೇ ಮೊದಲು ಎನ್ನುವುದು ಗಮನಾರ್ಹವಾಗಿದೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650