HOSANAGARA ; ತಾಲೂಕಿನ ಬಂಟರ ಯಾನೆ ನಾಡವರ ಸಂಘ ಇತ್ತೀಚಿನ ಕೆಲ ದಿನಗಳಿಂದ ನಿಷ್ಕ್ರಿಯ ಸ್ಥಿತಿಯಲ್ಲಿದ್ದು ಯಾವುದೇ ಕಾರ್ಯ ಚಟುವಟಿಕೆ ಇಲ್ಲದೆ ನಮ್ಮ ಅಸ್ತಿತ್ವ ಗುರುತಿಸಿಕೊಳ್ಳುವುದು ಕಷ್ಟಕರವಾದುದರಿಂದ ಸಮಾಜ ಬಾಂಧವರು ಒಗ್ಗೂಡಿ ನಮ್ಮ ಬಲ ಪ್ರದರ್ಶಿಸಬೇಕಾಗಿದೆ ಎಂದು ಇಂದು ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ತಾಲೂಕಿನ ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
ಸಂಘದ ತಾಲೂಕ ಅಧ್ಯಕ್ಷ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಮಾತನಾಡಿ, ಸಂಘ ಈ ಹಿಂದೆ ತಮ್ಮ ಕಾರ್ಯ ಚಟುವಟಿಕೆಯಿಂದ ಗುರುತಿಸಿಕೊಂಡಿದ್ದು ಈಗ ಸಂಘಟನೆಯ ಚುರುಕಿನ ಕ್ರಿಯೆ ನಿಷ್ಕ್ರಿಯವಾಗಿರುವ ಕಾರಣ ಸಂಘದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಪುನಃ ಎಲ್ಲರ ಸಂಘಟಿತರಾಗಿ ಯುವ ಸಮೂಹವನ್ನು ಸಂಘದೊಂದಿಗೆ ಸೆಳೆದುಕೊಳ್ಳುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ನಮ್ಮವರು ಅಸ್ತಿತ್ವದಲ್ಲಿ ಹಾಗೂ ಸಂಘಟನೆಯಲ್ಲಿ ಕ್ರಿಯಾಶೀಲರಾಗಿದ್ದಾರೆ ಆದರೆ ಘಟ್ಟದ ಮೇಲಿನ ಸಂಘಗಳ ಕಾರ್ಯ ಚಟುವಟಿಕೆ ಅಭಿವೃದ್ಧಿಯಲ್ಲಿ ಕುಂಟಿತಗೊಂಡ ಕಾರಣ ನಾವು ಯುವ ಸಮೂಹವನ್ನು ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಯ ತತ್ಪರಾಗಬೇಕಿದೆ.
ಹೊಸನಗರ ತಾಲೂಕಿನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಕುಲಬಾಂಧವರಿದ್ದು ಕೆಲವರು ಸ್ಥಿತಿವಂತರಾಗಿದ್ದರು ಹೆಚ್ಚಿನವರು ಬಡತನದ ಬೇಗೆ ಅನುಭವಿಸುತ್ತಿದ್ದಾರೆ ಈಗ ಸಂಘಕ್ಕೆ ಸ್ವಂತ ಕಟ್ಟಡವಾಗಲಿ ಜಾಗವಾಗಲಿ ಇಲ್ಲವಾಗಿದ್ದು ಈ ಬಗ್ಗೆ ಕುಲಬಾಂಧವರು ಸಂಘಟಿತರಾಗಿ ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ ಕೈಜೋಡಿಸಬೇಕೆಂದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಶೆಟ್ಟಿ ರಾಮಣ್ಣ ಶೆಟ್ಟಿ ಶ್ರೀನಿವಾಸ ಶೆಟ್ಟಿ ಕರುಣಾಕರ ಶೆಟ್ಟಿ ನಾಗರಾಜ ಶೆಟ್ಟಿ, ಸುರೇಶ ಶೆಟ್ಟಿ ಜಯರಾಮ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ ಸಂಪದ ಮನೆ ಶ್ರೀನಿವಾಸ ಶೆಟ್ಟಿ ರಾಜು ಶೆಟ್ಟಿ ಚಂದ್ರ ಶೆಟ್ಟಿ ಗಣಪತಿ ಮೊದಲಾದವರು ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.
ಈ ಸಭೆಯಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪಿ ಎಚ್ ಡಿ ಆಯ್ಕೆಯಾದ ಸಮಾಜ ಬಾಂಧವರಾದ ಕುಮಾರಿ ಸಂಜಿತಾ ಶೆಟ್ಟಿ ರವರನ್ನು ಗೌರವಿಸಲಾಯಿತು.
ಈ ಹಿಂದೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಶ್ರಮಿಸಿ ನಿಧನರಾದ ಹೇರಿ ಕುದ್ರು ಸದಾನಂದ ಶೆಟ್ಟರಿಗೆ ಅವರ ಸೇವೆಯನ್ನು ಸ್ಮರಿಸಿ ಸಂತಾಪ ಸೂಚಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ಪ್ರಾಥಮಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.